ಚಿಕ್ಕಬಳ್ಳಾಪುರ: ಆರೊಗ್ಯ ಸಚಿವ ಸುಧಾಕರ್ ಮಾಡಿದ್ದು ಒಂದೇ ಕೆಲಸ ಅದು ಲೂಟಿ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಎತ್ತಿನಹೊಳೆ ಯೋಜನೆ ಮತ್ತು ಹೆಚ್.ಎನ್.ವ್ಯಾಲಿ ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಇದೆಲ್ಲವನ್ನೂ ಬಿಜೆಪಿ ಮಾಡಿದ್ದು ಎಂದು ಸುಧಾಕರ್ ಹೇಳುತ್ತಾನೆ. ಆದರೆ ಸುಧಾಕರ್ ಮಾಡಿದ್ದು ಒಂದೇ ಕೆಲಸ ಅದು ಲೂಟಿ ಮಾತ್ರ. ಕೆಲಸ ಮಾಡುವುದು ನಾವು ಆದರೆ ಕಮಿಷನ್ ಹೊಡೆದಿದ್ದು ಸುಧಾಕರ್ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದ ನಂತರ ಪಕ್ಷ ತೊರೆದು ಕೇಸರಿ ಪಡೆ ಸೇರಿದವರು. ಡಾ.ಕೆ.ಸುಧಾಕರ್ ಒಬ್ಬ ಫ್ರಾಡ್, ಅವರಿಗೆ ಟಿಕೆಟ್ ನೀಡಬೇಡಿ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಆದರೂ ನಾವು ಟಿಕೆಟ್ ನೀಡಿದ್ದೆವು. ಆದರೆ ಸುಧಾಕರ್ಗೆ ಟಿಕೆಟ್ ನೀಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ, ನಾನು ಕೂಡ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದರು.
‘ಬಾಂಬೆಗೆ ಓಡಿಹೋದ ಸುಧಾಕರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾನೆ’
ಆಪರೇಷನ್ ಕಮಲಕ್ಕೆ ಬಲಿಯಾಗಿ ರಾತ್ರಿ 1 ಗಂಟೆ ಸುಮಾರಿಗೆ ಪ್ರಮಾಣ ಮಾಡಿ ಬೆಳಗ್ಗೆ ಬಾಂಬೆಗೆ ಓಡಿಹೋದ ಸುಧಾಕರ್ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮ ಜೊತೆಯಲ್ಲೇ ಇದ್ದ. ಆಗ ಸುಮ್ಮನಿದ್ದು ಈಗ ಆರೋಪ ಮಾಡುತ್ತಿದ್ದಾನೆ ಈ ಆಸಾಮಿ ಎಂದು ಏಕವಚನದಲ್ಲೇ ಸುಧಾಕರ್ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.