ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಕಳೆದ 25ದಿನಗಳಿಂದ ಕೊರೆವ ಚಳಿಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ತಮ್ಮ ಹೋರಾಟದ ಪ್ರಚಾರಕ್ಕಾಗಿ ಸ್ಥಾಪಿಸಿದ್ದ ಫೇಸ್ ಬುಕ್ ಪೇಜ್ ಅನ್ನು ಭಾನುವಾರ ಕೆಲವು ಗಂಟೆಗಳ ಕಾಲ ತಡೆ ಹಿಡಿಯಲಾಗಿದ್ದ ಘಟನೆ ನಡೆದಿದೆ. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೇಸ್ ಬುಕ್, ಅದು ತನ್ನ ಸ್ವಯಂಚಾಲಿತ ವ್ಯವಸ್ಥೆಯ ಪ್ರಮಾದದಿಂದ ಆಗಿದ್ದು, ಅದನ್ನು ಸರಿಪಡಿಸಲಾಗಿದೆ ಎಂದಿದೆ.
ಬಿಜೆಪಿ ಪರ ನಿಲುವನ್ನು ಹೊಂದಿದ್ದಕ್ಕಾಗಿ ಈಗಾಗಲೇ ವ್ಯಾಪಕ ಟೀಕೆಗೆ ಗುರಿಯಾಗಿರುವ ಫೇಸ್ ಬುಕ್ ನಿಂದ ಇದೀಗ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪೇಜ್ ತಡೆ ಹಿಡಿಯಲ್ಪಟ್ಟಿದ್ದುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ರೈತರ ಹೋರಾಟದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಬಿಜೆಪಿ ಐಟಿ ಸೆಲ್ ಗೆ ಸೆಡ್ಡುಹೊಡೆಯಲು ರೈತರೇ ಸ್ಥಾಪಿಸಿದ್ದ ‘ಕಿಸಾನ್ ಏಕತಾ ಮೋರ್ಚಾ’ ಫೇಸ್ ಬುಕ್ ಪೇಜ್ ತಡೆ ಹಿಡಿಯಲ್ಪಟ್ಟಿತ್ತು.
ನಮ್ಮ ಪರಿಶೀಲನೆಯ ಪ್ರಕಾರ, www.facebook.com/kisanektamorcha ಪೇಜ್ ನಲ್ಲಿ ಚಟುವಟಿಕೆ ಹೆಚ್ಚಿದ್ದುದು ನಮ್ಮ ಸ್ವಯಂ ಚಾಲಿತ ವ್ಯವಸ್ಥೆ ಪತ್ತೆ ಹಚ್ಚಿತ್ತು ಮತ್ತು ಅದು ನಮ್ಮ ಸಮುದಾಯ ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸುವುದರಿಂದ ಅದನ್ನು ಸ್ಪಾಮ್ ಎಂದು ಗುರುತಿಸಿತ್ತು. ವಿಷಯ ಗಮನಕ್ಕೆ ಬಂದ ಮೂರು ಗಂಟೆಗಳಲ್ಲಿ ಪೇಜ್ ಮರು ಸ್ಥಾಪಿಸಲಾಗಿದೆ ಎಂದು ಫೇಸ್ ಬುಕ್ ಇಂದು ಸ್ಪಷ್ಟನೆ ನೀಡಿದೆ.