ಸಮುದ್ರದಲ್ಲಿ ಮಗುಚಿದ ದೋಣಿ; ಕರಾವಳಿ ಕಾವಲು ಪೊಲೀಸರಿಂದ ಮೀನುಗಾರನ ರಕ್ಷಣೆ

Prasthutha|

ಭಟ್ಕಳ : ಇಲ್ಲಿನ ಅಳ್ವೆಕೋಡಿ ಕಾಕಿಗುಡ್ಡ ದ್ವೀಪದ ಹತ್ತಿರ ಸಮುದ್ರದಲ್ಲಿ ಮಗುಚಿಬಿದ್ದ ದೋಣಿಯಲ್ಲಿದ್ದ ಮೀನುಗಾರರೊಬ್ಬರನ್ನು ಭಟ್ಕಳ ಕರಾವಳಿ ಕಾವಲು ಪೊಲೀಸರು ರಕ್ಷಿಸಿದ್ದಾರೆ.

ಸಣಬಾವಿ ಗ್ರಾಮದ ಮಂಜು ಮೊಗೇರ ಎಂಬವರ ಮಗ ಯಾದವ (32) ರಕ್ಷಣೆಗೆ ಒಳಗಾದ ಮೀನುಗಾರ. ಯಾದವ ಅವರು ಬೆಳಗಿನ ಜಾವ ತಮ್ಮ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಜೋರಾಗಿ ಗಾಳಿ ಬೀಸಿದ್ದುದರಿಂದ ದೋಣಿ ಮಗುಚಿ ಬಿದ್ದಿತ್ತು.

- Advertisement -

ದೋಣಿಯಲ್ಲಿದ್ದ ಯಾದವ ನೀರಿನಲ್ಲಿ ಈಜುತ್ತಿರುವುದನ್ನು ಗಮನಿಸಿದ ಇಂಟರ್ ಸೆಪ್ಟರ್ ಬೋಟ್ ನಲ್ಲಿ ಕರ್ತವ್ಯದಲ್ಲಿದ್ದ ಕರಾವಳಿ ಕಾವಲು ಪಡೆ ಪೊಲೀಸರು ಧಾವಿಸಿ ಬಂದು ಅವರನ್ನು ರಕ್ಷಿಸಿದರು. ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಅಳ್ವೆ ಕೋಡಿಗೆ ಕರೆದುಕೊಂಡು ಬರಲಾಗಿದೆ. ಕಾರ್ಯಾಚರಣೆಯಲ್ಲಿ ಬೋಟ್ ಕ್ಯಾಪ್ಟನ್ ಮಲ್ಲಪ್ಪ ಮುದಿಗೌಡರ್, ಗಣೇಶ್ ನಾಯ್ಕ, ಕಲಾಸಿ ಸಂಜೀವ ನಾಯಕ, ಜನಾರ್ಧನ ಮೊಗೇರ ಮುಂತಾದವರಿದ್ದರು ಎಂದು ವರದಿಯೊಂದು ತಿಳಿಸಿದೆ.

- Advertisement -