ಫಿಫಾ ವಿಶ್ವಕಪ್‌| ಕ್ರೊವೇಷಿಯಾವನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಅರ್ಜೆಂಟೀನಾ

Prasthutha|

22ನೇ ಆವೃತ್ತಿಯ ಫಿಫಾ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ, ಕ್ರೊವೇಷಿಯಾ ತಂಡವನ್ನು 3-0 ಅಂತರದಲ್ಲಿ ಏಕಪಕ್ಷೀಯವಾಗಿ ಬಗ್ಗುಬಡಿಯುವ ಮೂಲಕ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ.

- Advertisement -

ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದ 34ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಲಿಯೋನೆಲ್‌ ಮೆಸ್ಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. 39ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಪಾಸ್‌ ಪಡೆದ ಜೂಲಿಯನ್‌ ಅಲ್ವಾರೆಝ್‌, ಮೈದಾನದ ಮಧ್ಯಭಾಗದಿಂದ ಏಕಾಂಗಿಯಾಗಿ ಚೆಂಡನ್ನು ನಿಯಂತ್ರಿಸುತ್ತಾ ಸಾಗಿ ಅರ್ಜೆಂಂಟೀನಾ ಪರ 2ನೇ  ಗೋಲು ದಾಖಲಿಸಿದರು.  ದ್ವಿತಿಯಾರ್ಧದ 69ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಅಮೋಘ ಪಾಸ್‌ಅನ್ನುಗೋಲು ಬಲೆಯ ಸಮೀಪದಲ್ಲೇ ಇದ್ದ ಅಲ್ವಾರೆಝ್‌, ಸುಲಭವಾಗಿ ಗುರಿ ಸೇರಿಸಿದರು.

ಮತ್ತೊಂದೆಡೆ ಗೋಲಿನ ಖಾತೆ ತೆರೆಯಲು ಕ್ರೊವೇಷಿಯಾ ವಿಫಲವಾಯಿತು. ಕಳೆದ ಬಾರಿ ರಷ್ಯಾದಲ್ಲಿ ನಡೆದಿದ್ದ , ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದ ಲೂಕಾ ಮಾಡ್ರಿಕ್‌ ತಂಡ, ಈ ಬಾರಿ ಸೆಮಿಯಲ್ಲೇ ಮುಗ್ಗರಿಸಿದೆ. ಶನಿವಾರ ಮೂರನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ.  

- Advertisement -

ವೃತ್ತಿ ಜೀವನದ ಅಂತಿಮ ವಿಶ್ವಕಪ್‌ ಆಡುತ್ತಿರುವ 35 ವರ್ಷದ ಮೆಸ್ಸಿ, ಯುವ ಆಟಗಾರರನ್ನೂ ನಾಚಿಸುವ ರೀತಿಯಲ್ಲಿ ಲುಸೈಲ್‌ ಮೈದಾನದಲಿ ಎದುರಾಳಿ ಆಟಗಾರರಿಗೆ ಸವಾಲಾದರು.  ಚಾಣಾಕ್ಷತನದ ಮತ್ತು ಮಿಂಚಿನ ಪಾಸ್‌ಗಳ ಮೂಲಕ ತಂಡದ ಪಾಲಿಗೆ ಆಸರೆಯಾದರು. ಅಂತಿಮವಾಗಿ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು.

ಫ್ರಾನ್ಸ್‌-ಮೊರಕ್ಕೊ ತಂಡಗಳ ನಡುವೆ ಬುಧವಾರ ತಡರಾತ್ರಿ ಎರಡನೇ ಸೆಮಿಫೈನಲ್‌ ನಡೆಯಲಿದ್ದು, ಈ ಪಂದ್ಯದ ವಿಜೇತರನ್ನು ಮೆಸ್ಸಿ ಪಡೆ, ಡಿಸೆಂಬರ್‌ 18, ಭಾನುವಾರದಂದು ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ನಡೆಯುವ ಫೈನಲ್‌ ಪಂದ್ಯದಲ್ಲಿಎದುರಿಸಲಿದೆ.



Join Whatsapp