ಹಾವೇರಿ ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಅವಧಿ ವಿಸ್ತರಣೆ ಹಾಗೂ ನೇರ ನೋಂದಣಿಗೆ ಅವಕಾಶ: ಕ.ಸಾ.ಪ

Prasthutha|

   ಬೆಂಗಳೂರು: ಹಾವೇರಿಯಲ್ಲಿ ಹಮ್ಮಿಕೊಂಡಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಯಾಗಿ ಭಾಗವಹಿಸುವವರಿಗೆ ಮತ್ತು ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸುವವರಿಗೆ ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಿನೂತನ  ಆಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸಮ್ಮೇಳನ ಪ್ರತಿನಿಧಿ ಹಾಗೂ ಪುಸ್ತಕ/ವಾಣಿಜ್ಯ ಮಳಿಗೆಗಳ  ನೋಂದಣಿಗೆ, https://bit.ly/3VlidZj  ಈ ಕೊಂಡಿಯ ಮೂಲಕ ಹಾಗೂ ಎಲ್ಲಾ ಸೇವಾ ಸಿಂಧು ಕೇಂದ್ರಗಳಲ್ಲಿ ಆನ್ ಲೈನ್ ನೋಂದಣಿ ಕಾರ್ಯ ಆರಂಭವಾಗಿದೆ. ಆಪ್ ಮೂಲಕ ಸಮ್ಮೇಳನದ ಪ್ರತಿನಿಧಿಗಳ ನೋಂದಣಿಗೆ ಹಾಗೂ ಮಳಿಗೆಗಳ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು ಸಾವಿರಾರು ಜನರು ಸಮ್ಮೇಳನದ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.  

- Advertisement -

       ಆದರೂ ಮಾಧ್ಯಮಗಳಲ್ಲಿ, ಕ್ಲಬ್ ಹೌಸ್ನಲ್ಲಿ ಕನ್ನಡಾಭಿಮಾನಿಗಳು, ಆಸಕ್ತರು, ಕಲಾವಿದರು, ಜನಪದ ಕಲಾವಿದರು ಸೇರಿ ಹಲವರು,  ಗ್ರಾಮಾಂತರ ಪ್ರದೇಶಗಳಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡುವುದಕ್ಕೆ ಸಮಸ್ಯೆಗಳು ಎದುರಾಗುತ್ತಿದೆ. ಇಂಟರ್ನೆಟ್ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಕೆಲವರಿಗೆ ಆನ್ ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ವ್ಯತ್ಯಯ ಆಗುತ್ತಿದೆ, ಇನ್ನೂ ಬಹುತೇಕರಲ್ಲಿ ಸ್ಮಾರ್ಟ್ ಪೋನ್ ಇಲ್ಲದಿರುವುದರಿಂದ ಸಮ್ಮೇಳನದ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ ಎಂದು ಮನವಿ ಮಾಡಿಕೊಂಡಿಕೊಂಡಿರುವುದನ್ನು  ಗಮನಿಸಿರುವುದಾಗಿ  ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

  ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವವರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ, ಜಿಲ್ಲಾ ಕಚೇರಿಯಲ್ಲಿ ನೇರವಾಗಿ (ಆಫ್ ಲೈನ್) ನೋಂದಣಿಗೆ ಅವಕಾಶ ಕಲ್ಪಿಸಿ, ಡಿಸೆಂಬರ್ ೧೮ರ ವರೆಗೆ ಇದ್ದ ಪ್ರತಿನಿಧಿಗಳ ನೋಂದಣಿ ಅವಧಿಯನ್ನು  ಡಿಸೆಂಬರ್ ೨೫ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.

- Advertisement -

ಸಮ್ಮೇಳನದ ಪ್ರತಿನಿಧಿಯಾಗಿ ಭಾಗ ವಹಿಸಲು ೫೦೦(ಐದುನೂರು) ರೂ. ನೀಡಿ ರಸಿದಿ ಪಡೆಯುವ ಜೊತೆಗೆ ಸ್ವ ವಿವರ ನೀಡುವುದರೊಂದಿಗೆ ನೋಂದಣಿ ಮಾಡಿಕೊಳ್ಳಬಹುದು ಅದರೊಂದಿಗೆ ನಾಡಿನ ಎಲ್ಲಾ ಸೇವಾ ಸಿಂಧು ಕೇಂದ್ರಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಪ್ ಮೂಲಕವೂ ಸಹ  86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಯಾಗಲು ಮತ್ತು ಮಳಿಗೆಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಹಾವೇರಿಯಲ್ಲಿ ವಸತಿ ವ್ಯವಸ್ಥೆ ಗಮನದಲ್ಲಿ ಇಟ್ಟುಕೊಂಡು ೨೦ (ಇಪ್ಪತ್ತು)  ಸಾವಿರ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲು ಪರಿಷತ್ತು ಮುಂದಾಗಿದೆ. ಈ ಹಿಂದೆ ಡಿಸೆಂಬರ್ ೧೮ರಂದು ಕೊನೆಯ ದಿನವೆಂದು ನಿಗದಿ ಮಾಡಲಾಗಿತ್ತು. ಆದರೆ ಕನ್ನಡಿಗರ ಒತ್ತಾಯದ ಮೇರೆಗೆ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ ೨೫ರ ವರೆಗೆ ಅಂದರೆ ಹೆಚ್ಚುವರಿ ಒಂದು ವಾರಗಳ ಕಾಲ ಮುಂದುವರಿಸಲಾಗಿದ್ದು, ೨೦(ಇಪ್ಪತ್ತು) ಸಾವಿರ ಪ್ರತಿನಿಧಿಗಳು, ೩೦೦(ಮೂನ್ನೂರು) ಪುಸ್ತಕ ಮಳಿಗೆಗಳು ಹಾಗೂ ೨೦೦(ಇನ್ನೂರು) ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಪದಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲು ಪರಿಷತ್ತು ಅವಕಾಶ ಕಲ್ಪಿಸಿಕೊಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Join Whatsapp