ಮುಂಬೈ: ಭಾರತ- ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದು, ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ರೋಚಕ ಜಯ ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸೀಸ್ ವನಿತೆಯರು, 1 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿದ್ದರು. ಸವಾಲಿನ ಗುರಿ ಬೆನ್ನತ್ತಿದ್ದ ಭಾರತ, 20 ಓವರ್ ಕಳೆಯುವಷ್ಟರಲ್ಲಿ 5 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿತು.
ಅಂತಿಮ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್ ಬೇಕಿತ್ತು. ಈ ವೇಳೆ ಸ್ಕಟ್ ಎಸೆತವನ್ನು ಬೌಂಡರಿಗಟ್ಟಿದ ದೇವಿಕಾ ವೈದ್ಯ, ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು.ಬಳಿಕ ಪಂದ್ಯ ಸೂಪರ್ ಓವರ್‌ಗೆ ಮುಂದೂಡಲ್ಪಟ್ಟಿತ್ತು.
ಮೊದಲು ಬ್ಯಾಟ್ ಮಾಡಿದ ಭಾರತ 20 ರನ್ ಗಳಿಸಿದರೆ, ಆಸ್ಟ್ರೇಲಿಯಾ 16 ರನ್ ಗಳಿಸಲಷ್ಟೇ ಶಕ್ತವಾಯಿತು. 47 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಈ ರೋಮಾಂಚಕಾರಿ ಪಂದ್ಯಕ್ಕೆ ಸಾಕ್ಷಿಯಾದರು.ಇದರೊಂದಿಗೆ, 2022ರಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ ಟಿ20 ಕ್ರಿಕೆಟ್‌ನಲ್ಲಿ ಮೊದಲ ಸೋಲು ಕಂಡಂತಾಗಿದೆ.
ಇಂದಿನ ಪಂದ್ಯಕ್ಕೂ ಮೊದಲು, ಪ್ರಸಕ್ತ ವರ್ಷ 12 ಟಿ20 ಪಂದ್ಯಗಳನ್ನಾಡಿದ್ದ ಆಸೀಸ್ ವನಿತೆಯರು, 9 ಗೆಲುವು ಮತ್ತು 3 ಪಂದ್ಯಗಳು ಫಲಿತಾಂಶ ಕಾಣದೆ ಕೊನೆಗೊಂಡಿತ್ತು.ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದಂತಾಗಿದೆ. ಇದೇ ಮೈದಾನದಲ್ಲಿ ಶುಕ್ರವಾರ ನಡೆದಿದ್ದ ಸರಣಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.
ಮೊದಲ ಪಂದ್ಯದಲ್ಲಿ ಅಜೇಯ 89 ರನ್‌ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಆಸ್ಟ್ರೇಲಿಯಾದ ಬೆತ್ ಮೂನಿ, ಇಂದಿನ ಪಂದ್ಯದಲ್ಲೂ ಅಜೇಯ 82 ರನ್‌ಗಳಿಸಿದರು. ತಹಿಲಾ ಮೆಕ್‌ಗ್ರಾಥ್ (70*) ಮತ್ತು ನಾಯಕಿ ಅಲಿಸ್ಸಾ ಹೀಲಿ 25 ರನ್ ಗಳಿಸಿದರು. ಚೇಸಿಂಗ್ ವೇಳೆ ಉತ್ತಮ ಆರಂಭ ಒದಗಿಸಿದ ಸ್ಮೃತಿ ಮಂದಾನ 79 ರನ್ ಗಳಿಸಿ ಸದರ್‌ಲೆಂಡ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಶಫಾಲಿ ವರ್ಮಾ 34, ನಾಯಕಿ ಹರ್ಮನ್ ಪ್ರೀತ್ ಕೌರ್ 21 ಹಾಗೂ ಕೀಪರ್ ರಿಚಾ ಘೋಶ್ 26 ರನ್‌ಗಳಿಸಿ ಅಜೇಯರಾಗುಳಿದರು.
ಕೊನೆಯಲ್ಲಿ ದೇವಿಕಾ ವೈದ್ಯ 5 ಎಸೆತಗಳಲ್ಲಿ 2 ಬೌಂಡರಿಯ ನೆರವಿನಿಂದ 11 ರನ್‌ಗಳಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದರು. ಬಳಿಕ ನಡೆದ ಸೂಪರ್ ಓವರ್‍ನಲ್ಲಿ ರೋಚಕವಾಗಿ ಜಯ ಗಳಿಸಿದ ಟೀಮ್ ಇಂಡಿಯಾ ವನಿತೆಯರು, ಜಯದ ಸಂಭ್ರಮವನ್ನು ಮೈದಾನದೆಲ್ಲೆಡೆ ರಾಷ್ಟ್ರಧ್ವಜದೊಂದಿಗೆ ಓಡಿ, ಸಂಭ್ರಮಿಸಿದರು.