ಅಹ್ಮದಾಬಾದ್: ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡದಿದ್ದರೂ ಮುಸ್ಲಿಂ ಮತದಾರರು ಅಧಿಕ ಇರುವ ಗುಜರಾತಿನ 17 ಕ್ಷೇತ್ರಗಳಲ್ಲಿ ಬಿಜೆಪಿಯು 12ರಲ್ಲಿ ಗೆಲುವು ಸಾಧಿಸಿದೆ. ಅದಕ್ಕೆ ಅಸದುದ್ದೀನ್ ಅವರ ಎಐಎಂಐಎಂ ಪಕ್ಷವು ಕಾಂಗ್ರೆಸ್ಸಿನ ಮತಗಳನ್ನೆಲ್ಲ ಸಾರಾ ಸಗಟಾಗಿ ಒಡೆದಿರುವುದೇ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ.
ಐದು ಕಡೆ ಮಾತ್ರ ಕಾಂಗ್ರೆಸ್ ಗೆಲುವು ಕಾಣಲು ಸಾಧ್ಯವಾಗಿದೆ. ಇಲ್ಲೆಲ್ಲ ಸಹಜವಾಗಿ ಹಿಂದೆ ಕಾಂಗ್ರೆಸ್ ಗೆಲ್ಲುತ್ತಿತ್ತು.
ಉದಾಹರಣೆಗೆ ಮುಸ್ಲಿಂ ಮತದಾರರು ಅಧಿಕ ಇರುವ ದರಿಯಾಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಕಳೆದ ಹತ್ತು ವರ್ಷಗಳಿಂದ ಶಾಸಕರಾಗಿರುವ ಗಿಯಾಸುದ್ದೀನ್ ಶೇಖ್ ಅವರು ಬಿಜೆಪಿಯ ಕೌಶಿಕ್ ಜೈನ್ ಎದುರು ಸೋತಿದ್ದಾರೆ.
ಬೇರೆ ಕಡೆ ಎಎಪಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತವನ್ನು ಒಡೆದರೆ ಇಲ್ಲೆಲ್ಲ ಅಸದುದ್ದೀನ್’ರ ಎಐಎಂಐಎಂ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳಿಗೆ ಕನ್ನಹಾಕಿದೆ ಎನ್ನಲಾಗಿದೆ.
ಮುಸ್ಲಿಮರು ಅಧಿಕವಿರುವ ಜಮಾಲ್’ಪುರ, ಖದಿಯಾ, ವಡಗಾಂವ್ ಪ್ರದೇಶಗಳಲ್ಲಿ ಎಐಎಂಐಎಂನ 13 ಅಭ್ಯರ್ಥಿಗಳು ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ನೇರ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಯಾಗಲಿ, ಮೊರ್ಬಿ ಸೇತುವೆ ದುರಂತವಾಗಲಿ ಬಿಜೆಪಿಗೆ ಹಾನಿ ಮಾಡಿಲ್ಲ. ಅಲ್ಲೆಲ್ಲ ಬಿಜೆಪಿ ಹಿಂದಿನಿಂತೆಯೇ ಗೆಲುವು ಸಾಧಿಸಿದೆ.