ಬೆಳಗಾವಿ ವಿವಾದ: ಸಿಎಂ ಬೊಮ್ಮಾಯಿ ತಕ್ಷಣ ಪ್ರಧಾನಿಯನ್ನು ಭೇಟಿ ಮಾಡಲಿ- ಸಿದ್ದರಾಮಯ್ಯ ಸಲಹೆ

Prasthutha|

ಬೆಂಗಳೂರು: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎರಡೂ ಕಡೆ ಬಿಜೆಪಿಯದೇ ಸರ್ಕಾರವಿದೆ. ಈ ಎರಡೂ ಸರ್ಕಾರಗಳು ಮಾತನಾಡಿಕೊಂಡು ಬೇಕಂತಲೇ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿರಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

- Advertisement -

ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮಹಾಜನ್ ಆಯೋಗದ ವರದಿ ಪ್ರಕಾರ ಈಗಾಗಲೇ ಇತ್ಯರ್ಥ ಆಗಿದೆ. ಆದರೆ ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಇದನ್ನು ಜೀವಂತವಾಗಿಟ್ಟುಕೊಂಡು ಕೆದಕುವ ಕೆಲಸ ಮಾಡುತ್ತಿದ್ದಾರೆ. ಈಗ ಅಲ್ಲಿನ ಸರ್ಕಾರ ಬೆಳಗಾವಿ ತಮಗೆ ಸೇರಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ. ಇದನ್ನು ನಾವಿದ್ದಾಗಲೂ ಮನವಿ ಹಾಕಿದ್ದರು. ಆಗ ನಾವು ಈ ಮನವಿ ವಿಚಾರಣೆಗೆ ಅರ್ಹವಾದುದ್ದಲ್ಲ ಎಂದು ವಾದ ಮಂಡಿಸಿದ್ದೆವು. ಈಗ ಸರ್ಕಾರ ಒಳ್ಳೆಯ ವಕೀಲರನ್ನು ಇಟ್ಟು ವಾದ ಮಾಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದ ಬಸ್ಸುಗಳಿಗೆ ಕಲ್ಲು ಹೊಡೆದರೆ, ಪುಂಡಾಟ ಮಾಡಿದರೆ ಇಲ್ಲಿನ ಮುಖ್ಯಮಂತ್ರಿಗಳು ಪ್ರಧಾನಿಗಳ ಬಳಿ ಹೋಗಿ ಮಾತನಾಡಬೇಕು ಮತ್ತು ಅವರಿಂದ ಇಂಥ ಪುಂಡಾಟಗಳನ್ನು ಮಾಡದಂತೆ ಹೇಳಿಸಬೇಕು. ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಇದೆ? ಇಲ್ಲಿ ಯಾರ ಸರ್ಕಾರ ಇದೆ? ಎರಡೂ ಕಡೆ ಬಿಜೆಪಿ ಸರ್ಕಾರ ಅಲ್ಲವಾ? ಇಬ್ಬರೂ ಮಾತನಾಡಿಕೊಂಡು ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಮುಖ್ಯಮಂತ್ರಿಗಳು ಪ್ರಧಾನಿಗಳನ್ನು ಭೇಟಿಮಾಡಿ ಮನವರಿಕೆ ಮಾಡಿಕೊಡಬೇಕು. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ಅದನ್ನು ಈ ರೀತಿ ವಿವಾದ ಯಾಕೆ ಮಾಡಬೇಕು? ಅವರು ಕೋರ್ಟ್ ನಲ್ಲಿ ಹೋರಾಟ ಮಾಡಲಿ, ನಾವು ಮಾಡೋಣ ಎಂದು ಹೇಳಿದರು.

- Advertisement -

ಕರ್ನಾಟಕದ ನೆಲ, ಜಲ, ಭಾಷೆ ಈ ವಿಚಾರದಲ್ಲಿ ಯಾವ ರಾಜೀಯೂ ಇಲ್ಲ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ನಮ್ಮದು. ಬೆಳಗಾವಿಯ ಒಂದೇ ಒಂದು ಇಂಚು ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವುದರಿಂದ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಗಳು, ಗೃಹ ಸಚಿವರು ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರ ಸರ್ಕಾರಕ್ಕೆ ಪುಂಡಾಟಿಕೆ ಮಾಡದಂತೆ ತಿಳಿಸಬೇಕು ಎಂದು ಆಗ್ರಹಿಸಿದರು.

ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿಯ ಹುಟ್ಟುಗುಣ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ ಚಂದ ನೋಡುತ್ತಾ ಕೂತಿದೆ. ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Join Whatsapp