ದೋಹಾ: ಕತಾರ್’ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ 16ರ ಘಟ್ಟದ ಹೋರಾಟಗಳಿಗೆ ತೆರೆಬಿದ್ದಿದ್ದು, ಕ್ವಾರ್ಟರ್ ಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. 32 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಇದೀಗ ಅಂತಿಮ 8 ತಂಡಗಳು ಕಣದಲ್ಲಿ ಉಳಿದಿವೆ.
ಲುಸೈಲ್ ಸ್ಟೇಡಿಯಂನಲ್ಲಿ ಮಂಗಳವಾರ ತಡರಾತ್ರಿ ನಡೆದ ಟೂರ್ನಿಯ 16ರ ಘಟ್ಟದ ಅಂತಿಮ ಪಂದ್ಯದಲ್ಲಿ ಪೋರ್ಚುಗಲ್ 6-1 ಗೋಲುಗಳ ಅಂತರದಲ್ಲಿ ಭರ್ಜರಿಯಾಗಿ ಸ್ವಿಜರ್’ಲ್ಯಾಂಡ್ ತಂಡವನ್ನು ಮಣಿಸಿತ್ತು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೊರಕ್ಕೊ, ಬಲಿಷ್ಠ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್’ನಲ್ಲಿ ಮಣಿಸಿ ಇತಿಹಾಸ ನಿರ್ಮಿಸಿತ್ತು.
ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್’ಫೈನಲ್ ಅಚ್ಚರಿ ಎಂದರೆ ಆಫ್ರಿಕನ್ ರಾಷ್ಟ್ರ ಮೊರಕ್ಕೊ ಮಾತ್ರ. 16ರ ಘಟ್ಟದಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್’ನಲ್ಲಿ ಹಿಂದಿಕ್ಕಿ ಮೊರಕ್ಕೊ, 92 ವರ್ಷಗಳ ಇತಿಹಾಸದ ಫಿಫಾ ವಿಶ್ವಕಪ್’ ನಲ್ಲಿ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 8ರ ಘಟ್ಟ ಪ್ರವೇಶಿಸಿದ ಆಫ್ರಿಕಾದ 4ನೇ ತಂಡ ಎಂಬ ಕೀರ್ತಿಯೂ ಮೊರಕ್ಕೊ ತಂಡದ ಪಾಲಾಗಿದೆ. ಇದಕ್ಕೂ ಮೊದಲು ಘಾನಾ (2010), ಸೆನೆಗಲ್ (2002) ಹಾಗೂ 1990ರಲ್ಲಿ ಕ್ಯಾಮರೂನ್ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಆದರೆ ಹಿಂದಿನ ಮೂರೂ ವಿಶ್ವಕಪ್’ಗಳಲ್ಲಿಯೂ ಕ್ವಾರ್ಟರ್ ಫೈನಲ್ ಹಂತವನ್ನು ದಾಟಲು ಆಫ್ರಿಕನ್ ರಾಷ್ಟ್ರಗಳಿಗೆ ಸಾಧ್ಯವಾಗಿಲ್ಲ. ಈ ಬಾರಿ ಮೊರಕ್ಕೊ, ಪೋರ್ಚುಗಲ್ ಸವಾಲನ್ನು ಮೀರಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ
ಡಿಸೆಂಬರ್ 9: ಕ್ರೊಯೇಷಿಯಾ vs ಬ್ರೆಜಿಲ್ | ರಾತ್ರಿ 8:30 ಕ್ಕೆ
ಡಿಸೆಂಬರ್ 9: ನೆದರ್ಲ್ಯಾಂಡ್ಸ್ vs ಅರ್ಜೆಂಟೀನಾ | ರಾತ್ರಿ 12:30
ಡಿಸೆಂಬರ್ 10: ಮೊರಾಕೊ vs ಪೋರ್ಚುಗಲ್ | ರಾತ್ರಿ 8:30
ಡಿಸೆಂಬರ್ 10: ಫ್ರಾನ್ಸ್ vs ಇಂಗ್ಲೆಂಡ್ | ರಾತ್ರಿ 12:30