ಕಾಸರಗೋಡು: ಅದ್ಧೂರಿಯಾಗಿ ಮಗಳ ಮದುವೆ ಮಾಡಿಕೊಟ್ಟ ಮಾವನಿಗೆ ಅಳಿಯ107 ಕೋಟಿ ರೂ. ವಂಚನೆ ಎಸಗಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.
ದುಬೈ ಮೂಲದ ಎನ್ಆರ್ ಐ ಉದ್ಯಮಿ ಅಬ್ದುಲ್ ಲಾಹಿರ್ ಹಸನ್ ಅವರು ಮಗಳನ್ನು ಕಾಸರಗೋಡಿನ ಯುವಕನೊಬ್ಬನಿಗೆ 2017ರಲ್ಲಿ ಮದುವೆ ಮಾಡಿಕೊಟ್ಟಿದ್ದರು. ಅಳಿಯ ಮುಹಮ್ಮದ್ ಹಫೀಜ್ ಗೆ ವಿವಾಹ ವೇಳೆ 1 ಸಾವಿರ ಸವರನ್ ಚಿನ್ನದ ಆಭರಣಗಳನ್ನು ಮಗಳ ಹೆಸರಲ್ಲಿ ಉಡುಗೊರೆಯಾಗಿ ನೀಡಿದ್ದರು. ಐದು ವರ್ಷಗಳಲ್ಲಿ, ಮಾವನ ಕೆಲವು ಆಸ್ತಿಗಳ ಮಾಲೀಕತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಹಫೀಜ್ ನ ನೈಜ ಬಂಡವಾಳ ಅಬ್ದುಲ್ ರಿಗೆ ತಡವಾಗಿ ತಿಳಿದಿದೆ.
ಅಳುವಾ ಪೊಲೀಸ್ ಠಾಣೆಯಲ್ಲಿ ಅಳಿಯನ ವಿರುದ್ಧ ದೂರು ಕೊಟ್ಟಿರುವ ಅಬ್ದುಲ್ , ಜಾರಿ ನಿರ್ದೇಶನಾಲಯವು ತನ್ನ ಮೇಲೆ 4 ಕೋಟಿ ರೂ. ದಂಡ ಹೇರಿದೆ ಎಂದು ಹಫೀಜ್ ಬಂದು ತಿಳಿಸಿದ. ಅದಕ್ಕಾಗಿ ನೆರವು ನೀಡಿದೆ. ಬಳಿಕ ಮತ್ತೊಂದು ದಿನ ಭೂ ಖರೀದಿ, ಚಪ್ಪಲಿ ಶೋ ರೂಂ ತೆರೆಯುವ ನೆಪಗಳನ್ನು ಒಡ್ಡಿ ಒಟ್ಟಾರೆ 92 ಕೋಟಿ ರೂ.ಗಳನ್ನು ಅಳಿಯ ಹಫೀಜ್ ಪಡೆದುಕೊಂಡಿದ್ದಾನೆ. ಅಲ್ಲದೆ ತನ್ನ ಕೆಲವು ಆಸ್ತಿಗಳನ್ನು ಕೂಡ ಅಡ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನ. 24ರಂದು ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರ ಕ್ರೈಂ ಬ್ರ್ಯಾಂಚ್ ಘಟಕಕ್ಕೆ ವಹಿಸಲಾಗಿದೆ. ವಂಚಕ ಅಳಿಯ ತಲೆಮರೆಸಿಕೊಂಡಿದ್ದು, ಸದ್ಯ ಆತ ಗೋವಾದಲ್ಲಿರುವುದಾಗಿ ತಿಳಿದು ಬಂದಿದೆ.
ದೂರು ನೀಡಿದ್ದರೂ ಅಳಿಯನನ್ನು ಬಂಧಿಸಲು ಅಥವಾ ವಿಚಾರಣೆಗೆ ಕರೆಸಲು ಅಳುವಾ ಪೊಲೀಸರು ವಿಫಲರಾಗಿದ್ದಾರೆ. ಆತನ ಬಳಕೆಗಾಗಿ ನೀಡಿದ್ದ 1.5 ಕೋಟಿ ರೂ ಮೌಲ್ಯದ ಕಾರನ್ನು ಕೂಡ ವಶಪಡಿಸಿಕೊಂಡಿಲ್ಲ ಎಂದು ಅಬ್ದುಲ್ ಆರೋಪಿಸಿದ್ದಾರೆ.