ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI ) ದ ರಾಷ್ಟ್ರೀಯ ಕಾರ್ಯದರ್ಶಿ ರವೂಫ್ ಶರೀಫ್ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿರುವುದನ್ನು ವಿರೋಧಿಸಿ ಸಿ.ಎಫ್.ಐ ಬಂಟ್ವಾಳ ಜಿಲ್ಲಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ, “ರವೂಫ್ ಶರೀಫ್ ಬಂಧನವು ಎನ್.ಆರ್.ಸಿ, ಸಿಎಎ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರರ ಬಂಧನದ ಮುಂದವರಿದ ಭಾಗವಾಗಿದೆ. ಬಿಜೆಪಿ ಸರ್ಕಾರವು ಈಡಿಯನ್ನು ದುರ್ಬಳಕೆ ಮಾಡಿಕೊಂಡು ಕ್ಯಾಂಪಸ್ ಫ್ರಂಟ್ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದರು.
ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬು ಅವರು, “ಅಕ್ರಮವಾಗಿ ಬಂಧಿಸಿದ ರಾಷ್ಟ್ರೀಯ ಕಾರ್ಯದರ್ಶಿಯನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಕಾರ್ಯಕ್ರದಲ್ಲಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ಜಿಲ್ಲಾಧ್ಯಕ್ಷ ಫಹದ್ ಅನ್ವರ್, ಕಾರ್ಯದರ್ಶಿ ಸಾಬಿತ್ ಬಂಟ್ವಾಳ, ಸಮಿತಿ ಸದಸ್ಯರಾದ ಸಫ್ವಾನ್, ಐಮಾನ್, ಹಮೀದ್, ಸಜ್ಜಾದ್, ನಿಯಾಜ್ ಮತ್ತಿತರರು ಉಪಸ್ಥಿತರಿದ್ದರು. ಅಶ್ಪಾಕ್ ಅವರು ಕಾರ್ಯಕ್ರಮವನ್ನು ನಿರೂಪಣೆಗೈದು, ಧನ್ಯವಾದ ಅರ್ಪಿಸಿದರು.