ತಿರುವನಂತಪುರಂ: ‘ದಿ ಕೇರಳ ಸ್ಟೋರಿ’ ಎಂಬ ಮುಸ್ಲಿಮ್ ವಿರೋಧಿ ಚಿತ್ರದ ಟೀಸರ್ ಬಗ್ಗೆ ಎಫ್ ಐಆರ್ ದಾಖಲಿಸುವಂತೆ ಕೇರಳ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ದಶಕದಲ್ಲಿ 32,000 ಕ್ಕೂ ಹೆಚ್ಚು ಕೇರಳದ ಮಹಿಳೆಯರು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಂಡು ಐಸಿಸ್ ಗೆ ಸೇರ್ಪಡೆಯಾಗಿದ್ದಾರೆ ಎಂಬ ನಟಿ ಅದಾ ಶರ್ಮಾ ಹೇಳಿಕೆಯ ‘ದಿ ಕೇರಳ ಸ್ಟೋರಿ’ ಚಿತ್ರದ ಟೀಸರ್ ಅನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಚಲನಚಿತ್ರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಕಳುಹಿಸಲಾದ ದೂರನ್ನು ಆಧರಿಸಿ ಈ ನಿರ್ದೇಶನ ನೀಡಲಾಗಿದ್ದು, ಹೈಟೆಕ್ ಅಪರಾಧ ವಿಚಾರಣಾ ಕೋಶವು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ, ವರದಿಗಳನ್ನು ಕೇರಳ ಡಿಜಿಪಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರದ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೂ ದೂರು ನೀಡಲಾಗಿದೆ.