ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ ಎಲ್ ಎಸ್ ಎಫ್) ವತಿಯಿಂದ ನ.12 ರಂದು ಹೈಕೋರ್ಟ್ ಸೇರಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಕೆಎಸ್ಎಲ್ಎಸ್ಎಫ್ ಸದಸ್ಯ ಕಾರ್ಯದರ್ಶಿ ಜೈಶಂಕರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಅದಾಲತ್ ನಲ್ಲಿ ಭಾಗವಹಿಸಲು ಇಚ್ಛಿಸುವವರು ನ.10ರವರೆಗೆ ಪ್ರಾಧಿಕಾರ ನಡೆಸುವ ಸಂಧಾನ ಪೂರ್ವ ಸಭೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ನ್ಯಾಯಾಲಯಗಳಲ್ಲಿ ಉಳಿದಿರುವ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಾರ್ವಜನಿಕರು ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದ್ದು, ಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ದಾವೆದಾರರು ಹೈಕೋರ್ಟ್ ಕಾನೂನು ಸೇವಾ ಸಮಿತಿ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದು.