ಪರೀಕ್ಷೆಯಲ್ಲಿ ನಕಲು ಮಾಡಿದ ಕಾರಣಕ್ಕೆ ಹೊರ ಹಾಕಿದ್ದರಿಂದ ಮನನೊಂದು SSLC ವಿದ್ಯಾರ್ಥಿ ಆತ್ಮಹತ್ಯೆ

Prasthutha|

ಬೆಂಗಳೂರು: ಪರೀಕ್ಷೆ ವೇಳೆ ಕಾಪಿ ಹೊಡೆದಿದ್ದಾನೆ ಎಂಬ ಕಾರಣಕ್ಕೆ ತರಗತಿಯಿಂದ ಶಿಕ್ಷಕಿ ಹೊರಹಾಕಿದ್ದ ಕಾರಣಕ್ಕೆ ವಿದ್ಯಾರ್ಥಿಯೋರ್ವ ಅಪಾರ್ಟ್ ಮೆಂಟ್ ನ  ಹದಿನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರಕರಣ ಸಂಬಂಧ ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ನಾಗವಾರ ಬಳಿಯ ಆರ್ ಆರ್ ಸಿಗ್ನೇಚರ್ ಅಪಾರ್ಟ್ ಮೆಂಟ್ ನಲ್ಲಿ ಮೊಯಿನ್ ಆತ್ಮಹತ್ಯೆಗೆ ಶರಣಾಗಿದ್ದ. ಮುಹಮ್ಮದ್ ನೂರ್, ನೋಹೇರಾ ದಂಪತಿಯ ಒಬ್ಬನೇ ಮಗನಾಗಿದ್ದ ಮೊಯಿನ್ ಖಾನ್ ಖಾಸಗಿ ಸ್ಕೂಲ್‍ ನಲ್ಲಿ ಎಸ್‍ ಎಸ್‍ ಎಲ್‍ ಸಿ ಓದುತ್ತಿದ್ದ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕಾಪಿ ಹೊಡೆಯುತ್ತಿದ್ದ ಮೊಯಿನ್ ಅನ್ನು ಕಂಡ ಶಿಕ್ಷಕಿ ತರಗತಿಯಿಂದ ಹೊರಹಾಕಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಸ್ಕೂಲ್‍ ನಿಂದ ಮೊಯಿನ್ ಹೊರಬಂದಿದ್ದನು. ಘಟನೆಯಿಂದ ಮನನೊಂದ ಮೊಯಿನ್ ಸಂಜೆ 5 ಗಂಟೆ ವೇಳೆಗೆ ಸಿಗ್ನೇಚರ್ ಅಪಾರ್ಟ್ಮೆಂಟ್‌ನ ಹದಿನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.

- Advertisement -

ಬಳಿಕ ಪೋಷಕರು ನೀಡಿರುವ ದೂರಿನ್ವಯ ಸಂಪಿಗೆಹಳ್ಳಿ ಪೊಲೀಸರು ಟೀಚರ್ ವಿರುದ್ಧ ಎಫ್‍ ಐಆರ್ ದಾಖಲಿಸಿಕೊಂಡಿದ್ದಾರೆ.

ಪೋಷಕರು ನೀಡಿರುವ ದೂರಿನ್ವಯ ಪ್ರಾಥಮಿಕವಾಗಿ ಶಾಲೆಯ ಶಿಕ್ಷಕರನ್ನು ವಿಚಾರಣೆ ನಡೆಸಿದ ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ 306 – ಆತ್ಮಹತ್ಯೆ ಗೆ ಪ್ರಚೋದನೆ ಅಡಿಯಲ್ಲಿ ಟೀಚರ್ ವಿರುದ್ಧವಾಗಿ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಸಂಬಂಧ ಕ್ಲಾಸ್ ಶಿಕ್ಷಕಿ, ಅಪಾರ್ಟ್ ಮೆಂಟ್‌ನ ಭಧ್ರತಾ ಸಿಬ್ಬಂದಿ ಸೇರಿದಂತೆ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದರು. ವಿಚಾರಣೆ ವೇಳೆ ವಿದ್ಯಾರ್ಥಿಯನ್ನು ಕೊಠಡಿಯ ಮುಂಭಾಗ ನಿಲ್ಲಿಸಿದ್ದ ಶಿಕ್ಷಕಿ ಶಾಲೆಯಿಂದ ಹೊರಗೆ ವಿದ್ಯಾರ್ಥಿಯನ್ನು ಕಳುಹಿಸಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನ ಬಳಿಕ ಟೀಚರ್ ಕೊಠಡಿಯ ಹೊರ ಬಂದುನೋಡಿದಾಗ ಆತ ಇರಲಿಲ್ಲ. ಆಗ ಶಾಲಾ ಶಿಕ್ಷಕರು ಸಂಪೂರ್ಣ ಶಾಲೆಯನ್ನು ಹುಡುಕಾಡಿದ್ದರು. ವಿದ್ಯಾರ್ಥಿ ಕಾಣದಿದ್ದಾಗ ತಕ್ಷಣವೇ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಮೊಯಿನ್ ಮನೆಯಿರುವುದು ಅಪಾರ್ಟ್ ಮೆಂಟ್‌ ಮುಂಭಾಗದ ರಸ್ತೆಯ ಬದಿಯಲ್ಲಾಗಿದೆ. ಅಪಾರ್ಟ್ ಮೆಂಟ್ ಗೆ ಅಪರಿಚಿತ ಪ್ರವೇಶವಿಲ್ಲ, ಆದರೂ ಹೇಗೆ ಅಪಾರ್ಟ್ ಮೆಂಟ್‌ ನ ಟೆರೇಸ್‍ ಗೆ ಮೊಯಿನ್ ಹೋದ ಎಂಬುದರ ಬಗ್ಗೆ ಪ್ರಶ್ನೆ ಇತ್ತು. ಇದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಮೊಯಿನ್, ಅದೇ ಅಪಾರ್ಟ್ ಮೆಂಟ್‌ ನ ವಿದ್ಯಾರ್ಥಿಗಳ ಜೊತೆಗೆ ಒಳ ಹೋಗಿದ್ದ. ಆ ಅಪಾರ್ಟ್ ಮೆಂಟ್‌ನ ವಿದ್ಯಾರ್ಥಿಗೂ ಮೊಯಿನ್ ಗೊತ್ತಿರಲಿಲ್ಲ. ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಈತ ಅಪಾರ್ಟ್ ಮೆಂಟ್‌ಗೆ ಹೋಗಿದ್ದರಿಂದ ಸೆಕ್ಯೂರಿಟಿಯವರು ಗೊಂದಲಕ್ಕೀಡಾದರು. ಮೊಯಿನ್ ಸಮವಸ್ತ್ರ ಧರಿಸಿದ್ದರಿಂದ ಸೆಕ್ಯೂರಿಟಿಗೆ ಗೊಂದಲಕ್ಕೀಡಾಗಿ ಒಳಬಿಟ್ಟಿದ್ದರು ಎಂಬ ಸತ್ಯ ವಿಚಾರಣೆ ವೇಳೆ ಬಯಲಾಗಿದೆ.



Join Whatsapp