✍️ಇಸ್ಮತ್ ಪಜೀರ್
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬ್ಯಾನ್ ಆಗಿದೆ. ಈಗ ಅದರ ಪರ ಮಾತನಾಡುವುದೂ ತಪ್ಪು.ಎಸ್ ಡಿಪಿಐ ಎಂಬ ರಾಜಕೀಯ ಪಕ್ಷವನ್ನು ಬ್ಯಾನ್ ಮಾಡಲಾಗಿಲ್ಲ ಎಂಬುವುದು ನಮಗೆಲ್ಲಾ ತಿಳಿದ ವಿಚಾರ.
ಇತ್ತೀಚೆಗೆ ತಲಪಾಡಿ ಮತ್ತು ಬಿ.ಸಿ.ರೋಡಿನಲ್ಲಿರುವ ಎಸ್ ಡಿಪಿಐ ಕಚೇರಿಗೆ ಪೊಲೀಸರು ದಾಳಿ ಮಾಡಿ ಬೀಗ ಜಡಿದಿದ್ದಾರೆ. ಅಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಎಸ್ ಡಿಪಿಐ ಪಕ್ಷದ ಕಚೇರಿಯೆಂದ ಮಾತ್ರಕ್ಕೆ ಅಲ್ಲಿ ಅವರ ಪಕ್ಷದ ಚಟುವಟಿಕೆಗಳಿಗಿಂತ ಹೆಚ್ಚಾಗಿ ಸಾರ್ವಜನಿಕ ಮಾಹಿತಿ ಕೇಂದ್ರಗಳಾಗಿ ಅವು ಕಾರ್ಯಾಚರಿಸುತ್ತಿವೆ. ಈ ಮಾಹಿತಿ ಕೇಂದ್ರಗಳಲ್ಲಿ ಮಕ್ಕಳ ಸ್ಕಾಲರ್ ಶಿಪ್, ಆದಾಯ ಮತ್ತು ಜಾತಿ ದೃಢೀಕರಣ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ, ಆಧಾರ್, ಮತಚೀಟಿ ತಿದ್ದುಪಡಿ ಇತ್ಯಾದಿ ಸೇವೆಗಳನ್ನು ಉಚಿತವಾಗಿ ಜಾತಿ-ಮತ- ಪಕ್ಷ- ಪಂಗಡಗಳಿಗತೀತವಾಗಿ ಎಲ್ಲರಿಗೂ ನೀಡುತ್ತಾ ಬಂದಿದ್ದಾರೆ. ಸದ್ಯ ಈ ಮಾಹಿತಿ ಕೇಂದ್ರಗಳಿಗೆ ಸರಕಾರವು ಬೀಗ ಜಡಿದಿದ್ದರಿಂದ ಸಾವಿರಾರು ವಿಲೇವಾರಿಯಾಗದ ಫಾರ್ಮುಗಳು ಕಚೇರಿಯೊಳಗೆ ಬಾಕಿಯಾಗಿ ಎಲ್ಲರ ಕೆಲಸಗಳೂ ತಡೆ ಹಿಡಿಯಲ್ಪಟ್ಟಿವೆ. ಮಕ್ಕಳ ಸ್ಕಾಲರ್ ಶಿಪ್ ಅರ್ಜಿಗಳು, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳು ಅದರೊಳಗೇ ಬಾಕಿಯಾಗಿರುವುದರಿಂದ ಮಕ್ಕಳಿಗೆ ಸಿಗಬೇಕಾದ ಸ್ಕಾಲರ್ ಶಿಪ್ ಗಳಿಗೂ ತಡೆಬೀಳುವಂತಾಗಿದೆ. ಈಗಾಗಲೇ ಸ್ಕಾಲರ್ ಶಿಪ್ ಗೆ ಅರ್ಜಿ ಹಾಕುವ ಕೊನೆಯ ದಿನವೂ ಕಳೆದಿದೆ. ರಾಜಕೀಯ ಕಾರಣಗಳೇನೇ ಇರಲಿ, ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸಬೇಕಾಗಿ ಬಂದಿರುವುದು ವಿಷಾದನೀಯ.
ಸರಕಾರವು ಸಾರ್ವಜನಿಕರ ಅರ್ಜಿ ಫಾರ್ಮುಗಳು, ದಾಖಲೆಗಳನ್ನು ಕೂಡಲೇ ಅವರವರಿಗೆ ಮರಳಿಸಬೇಕು. ಸರಕಾರದ ಈ ನಡೆಯಿಂದಾಗಿ ಮಕ್ಕಳು ಸ್ಕಾಲರ್ ಶಿಪ್ ನಿಂದ ವಂಚಿತರಾಗಬಾರದು. ಆದುದರಿಂದ ಸರಕಾರ ಅವುಗಳನ್ನು ಅವುಗಳ ವಾರೀಸುದಾರರಿಗೆ ಮರಳಿಸಿದ ದಿನಾಂಕದಿಂದ ಕನಿಷ್ಠ ಹತ್ತು ದಿನಗಳವರೆಗೆ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಮುಂದೂಡಲೇಬೇಕು. ನಿಮ್ಮ ರಾಜಕೀಯ ಮೇಲಾಟದಿಂದ ಜನತೆ ಸಂಕಷ್ಟ ಅನುಭವಿಸುವಂತಾಗಬಾರದು.