5,8 ನೇ ತರಗತಿಯ ಮಕ್ಕಳಿಗೆ ರಾಜ್ಯ ಮಟ್ಟದ ಪರೀಕ್ಷೆ; ಶಿಕ್ಷಣ ಇಲಾಖೆಯ ನಡೆಗೆ ತೀವ್ರ ಆಕ್ಷೇಪ

Prasthutha|


ಬೆಂಗಳೂರು: ಮಕ್ಕಳ ಕಲಿಕೆಯ ಗುಣಮಟ್ಟ ಅರಿಯಲು 5 ಹಾಗೂ 8ನೇ ತರಗತಿಯ ಮಕ್ಕಳಿಗೆ ರಾಜ್ಯಮಟ್ಟದ ಪರೀಕ್ಷೆ ನಡೆಸಲು ಚರ್ಚೆ ನಡೆಯುತ್ತಿದ್ದು, ಅಕ್ಟೋಬರ್ 12ರಂದು ಇಲಾಖಾ ಮಟ್ಟದ ಸಭೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಆರ್ ಟಿಇ- ಶಿಕ್ಷಣ ಹಕ್ಕುಗಳ ಕಾಯ್ದೆಯಡಿ 8ನೇ ತರಗತಿಯ ತನಕ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ. ಇದು ಎಸ್ ಎಸ್ಎಲ್ ಸಿ ಪರೀಕ್ಷೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕಲಿಕೆಯ ಗುಣಮಟ್ಟ ಅರಿಯಲು ಈ ಪರೀಕ್ಷೆ ಅಗತ್ಯ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಶಿಕ್ಷಣ ಸಚಿವರ ನಡೆಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ರಾಜ್ಯ ಸರ್ಕಾರದ ಹಲವು ವೈಫಲ್ಯಗಳ ಜೊತೆ ಇದೂ ಕೂಡಾ ಒಂದು ಆಕ್ಷೇಪಾರ್ಹ ತೀರ್ಮಾನ ಎನಿಸಲಿದೆ ಎಂದು ರಾಜಕೀಯ ವಿಶ್ಲೇಷಕ, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಹೇಳಿದ್ದಾರೆ.

- Advertisement -


ಈ ಬಗ್ಗೆ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ರಮೇಶ್ ಬಾಬು, ಕಳೆದ ಒಂದು ವರ್ಷದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಗೊಂದಲಮಯ ನೀತಿಗಳಿಂದ ಪದೇ ಪದೇ ಸುದ್ದಿಯಾಗುತ್ತಿದೆ. ಈ ರೀತಿಯ ಕ್ರಮಗಳ ಬಗ್ಗೆ ಬಹುಕಾಲದಿಂದ ಹಲವಾರು ಮಾದರಿಯಲ್ಲಿ ವಿರೋಧ ವ್ಯಕ್ತವಾಗಿವೆ. ಹಾಗಾಗಿ ಇಂತಹ ತೀರ್ಮಾನಗಳತ್ತ ಸರ್ಕಾರ ಗಮನಹರಿಸಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾರಕವಾಗುವ ಮತ್ತು ಶೈಕ್ಷಣಿಕ ಗುಣಮಟ್ಟದ ಕುಸಿತಕ್ಕೆ ಕಾರಣವಾಗಬಹುದಾದ ಉದ್ದೇಶಿತ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp