ಜೈಪುರ: ವಿಶ್ವದ ದಿಗ್ಗಜ ಕ್ರಿಕೆಟ್ ಆಟಗಾರರ ಭಾಗವಹಿಸುವಿಕೆಯೊಂದಿಗೆ ಗಮನ ಸೆಳೆದಿದ್ದ ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್ ಪಂದ್ಯವು ಬುಧವಾರ ನಡೆಯಲಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಇರ್ಫಾನ್ ಪಠಾಣ್ ಸಾರಥ್ಯದ ಭಿಲ್ವಾರಾ ಕಿಂಗ್ಸ್, ಗೌತಮ್ ಗಂಭೀರ್ ನಾಯಕನಾಗಿರುವ ಇಂಡಿಯಾ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸಲಿದೆ.
ಭಾನುವಾರ ನಡೆದಿದ್ದ ಕ್ವಾಲಿಫೈಯರ್-1 ಪಂದ್ಯದಲ್ಲಿ ಉಭಯ ತಂಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್ ಅಂತರದಲ್ಲಿ ಗೆದ್ದು, ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಿಲ್ವಾರಾ ಕಿಂಗ್ಸ್, 5 ವಿಕೆಟ್ ನಷ್ಟದಲ್ಲಿ 226 ರನ್ಗಳಿಸತ್ತು. ಕಠಿಣ ಗುರಿ ಚೇಸ್ ಮಾಡಿದ ಕ್ಯಾಪಿಟಲ್ಸ್, ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.
ಟೂರ್ನಿಯಲ್ಲಿ ಗರಿಷ್ಠ ರನ್ಗಳಿಸಿರುವ ವಿಲಿಯಂ ಪೋರ್ಟರ್ಫೀಲ್ಡ್ ಮತ್ತು ವಿಕೆಟ್ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಫಿಡೆಲ್ ಎಡ್ವರ್ಡ್ಸ್ ಭಿಲ್ವಾರಾ ಕಿಂಗ್ಸ್ ತಂಡದಲ್ಲಿದ್ದಾರೆ. ಐರ್ಲೆಂಡ್ನ ಮಾಜಿ ನಾಯಕ ಪೋರ್ಟರ್ಫೀಲ್ಡ್ 6 ಪಂದ್ಯಗಳಿಂದ 255 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಎಡ್ವರ್ಡ್ಸ್ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಮತ್ತು ಭಾರತದ ಮಾಜಿ ಆಲ್ರೌಂಡರ್ ಯೂಸುಫ್ ಪಠಾಣ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಒಟ್ಟು 4 ಕೋಟಿ ಬಹುಮಾನ
ಲೆಜೆಂಡ್ಸ್ ಲೀಗ್ ಟೂರ್ನಿಯ ವಿಜೇತರು 2 ಕೋಟಿ ನಗದು ಬಹುಮಾನ ಪಡೆಯಲಿದ್ದು, ರನ್ನರ್ಅಪ್ ತಂಡ 1 ಕೋಟಿ ಪಡೆಯಲಿದೆ. ಎರಡನೇ ರನ್ನರ್ಅಪ್ ಗುಜರಾತ್ ಜೈಂಟ್ಸ್ಗೆ 50 ಲಕ್ಷ ನಗದು ಪಡೆಯಲಿದೆ.