ರಾವಣನ ಪ್ರತಿಕೃತಿ ದಹಿಸಿದರೆ, ರಾಮನ ಪ್ರತಿಕೃತಿಗೂ ಬೆಂಕಿ ಹಚ್ಚುತ್ತೇವೆ: ದಲಿತ ಸೇನೆ ಎಚ್ಚರಿಕೆ

ಕಲ್ಬುರ್ಗಿ: ರಾವಣನ ಪ್ರತಿಕೃತಿಯನ್ನು ದಹನ ಮಾಡಿದರೆ, ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುವುದು ಎಂದು ದಲಿತ ಸೇನೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬದ ದಿನ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿಜಯ ದಶಮಿ (ದಸರಾ) ಸಂದರ್ಭದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸುವ ಕಾರ್ಯಕ್ರಮವನ್ನು ದಲಿತ ಸೇನೆ ವಿರೋಧಿಸುತ್ತಿದೆ.

ಈ ಮಧ್ಯೆ ಕಲ್ಬುರ್ಗಿಯ ಅಪ್ಪಾ ಜಾತ್ರಾ ಮೈದಾನದ ಆವರಣದಲ್ಲಿ ಸಂಘಪರಿವಾರ ಸಂಘಟನೆಗಳು 50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಆಯೋಜಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಇದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ. ಸಂಘಪರಿವಾರದ ಕಾರ್ಯಕರ್ತರು ರಾವಣನ ಪ್ರತಿಕೃತಿಯನ್ನು ಸುಟ್ಟರೆ ರಾಮನ ಪ್ರತಿಕೃತಿಯನ್ನು ದಹಿಸುವುದಾಗಿ ಎಚ್ಚರಿಕೆ ನೀಡಿದೆ.

ದಲಿತ ಸಂಘಟನೆಗಳಿಂದ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಕೈಬಿಟ್ಟು ಇತರ ಆಚರಣೆಗಳನ್ನು ಆಚರಿಸುತ್ತಿವೆ.