ಒಡಿಶಾ: ಸಿಗಡಿ ಸಂಸ್ಕರಣಾ ಘಟಕದಿಂದ ಉಂಟಾದ ಅನಿಲ ಸೋರಿಕೆಯಿಂದಾಗಿ 28 ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಹೈಲ್ಯಾಂಡ್ ಆಗ್ರೋ ಫುಡ್ ಪ್ರೈವೇಟ್ ಲಿಮಿಟೆಡ್ ಎಂಬ ಸೀಗಡಿ ಕಾರ್ಖಾನೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ 28 ಕಾರ್ಮಿಕರನ್ನು ರಕ್ಷಿಸಿ ಖಂಡಪಾಡಾ ಆಸ್ಪತ್ರೆಗೆ ಕಳುಹಿಸಿತು. ಅವರಲ್ಲಿ 15 ಜನರನ್ನು ಬಾಲಸೋರ್ ಮತ್ತು ಇತರ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
28 ಜನರನ್ನು ಖಂಡಪಾಡಾದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, 15 ಜನರನ್ನು ಬಾಲಸೋರ್ ಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಕೇವಲ 7 ಕಾರ್ಮಿಕರನ್ನು ಮಾತ್ರ ಬಾಲಸೋರ್ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ 4 ಜನರ ಸ್ಥಿತಿ ಗಂಭೀರವಾಗಿದೆ ಮತ್ತು 3 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಾಲಸೋರ್ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಡಾ.ಜುಲಾಲ್ಸೆನ್ ಜಗದೇವ್ ಹೇಳಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.