ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ “ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ”ಯನ್ನು ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.

ಬಳಿಕ ಪ್ರತಾಪ್ ಸಿಂಹ ಮಾತನಾಡಿ, ನಾಡಹಬ್ಬ ದಸರಾ ಹಬ್ಬದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಆಸಕ್ತಿ ಹೊಂದಿದ್ದು, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದಾರೆ ಎಂದರು.

- Advertisement -

ಎರಡು ವರ್ಷಗಳಿಂದ ಕೋವಿಡ್, ನೆರೆಯ ಕಾರಣದಿಂದ ಅದ್ಧೂರಿ ದಸರಾ ಆಚರಣೆ ಮಾಡಲಾಗಿರಲಿಲ್ಲ. ಈ ಬಾರಿ ಮುಖ್ಯ ಮಂತ್ರಿಗಳ ಒಪ್ಪಿಗೆ ಪಡೆದು ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆಯೋಜನೆ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಆಗಮನ ಹಾಗೂ ಯುವದಸರಾವನ್ನು ಅಪ್ಪು ನಮನವಾಗಿ ಆಚರಣೆಯು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ವೇದಿಕೆ ಆರಂಭದಲ್ಲಿ ನಾಲ್ಕು ಯೋಗಾಪಟುಗಳು ಯೋಗಾಪ್ರದರ್ಶನ ಮಾಡಿದರು.

12 ವರ್ಷ ಮೇಲ್ಪಟ್ಟವರಿಂದ 65 ವರ್ಷದವರವರೆಗೆ, ಬಾಲಕರು,ಬಾಲಕಿಯರು,ಪುರುಷರು,ಮಹಿಳೆಯರು ನಾಲ್ಕು ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಶೇಷಚೇತನರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಈ ಸಂದರ್ಭ ದಸರಾ ಯೋಗಾ ಉಪಸಮಿತಿ ಅಧ್ಯಕ್ಷ ಬಾಲಕೃಷ್ಣ, ಜಂಗಲ್ ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ, ಯೋಗದಸರಾ ಉಪವಿಶೇಷಾಧಿಕಾರಿ ಸೀಮಂತಿನಿ, ಯೋಗಾ ಫೌಂಡೇಶನ್ ಕಾರ್ಯದರ್ಶಿ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.