ಸೂಡಾನಿನಲ್ಲಿ 72 ಗಂಟೆಗಳ ಕದನ ವಿರಾಮ

Prasthutha|

ಕಾರ್ತೂಮ್: ಯುದ್ಧಪೀಡಿತ ಸೂಡಾನಿನ ಜನರಲ್ ಗಳು ಮೂರು ದಿನಗಳ ಕದನ ವಿರಾಮಕ್ಕೆ ಒಪ್ಪಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಂಗಳವಾರ ಪ್ರಕಟಿಸಿದರು.
ಸೇನೆ ಮತ್ತು ಅರೆ ಸೇನಾಪಡೆ ನಡುವೆ ಅಧಿಕಾರಕ್ಕಾಗಿ ಸೂಡಾನಿನಲ್ಲಿ ಉಂಟಾಗಿರುವ ಸಂಘರ್ಷದಲ್ಲಿ 10 ದಿನಗಳಲ್ಲಿ 427 ಜನರು ಹತರಾಗಿದ್ದು, 3,700 ಜನರು ಗಾಯಗೊಂಡಿರುವರೆಂದು ಯುಎಸ್’ಎ ವರದಿ ಮಾಡಿದೆ.

- Advertisement -


“ಕಳೆದ 48 ಗಂಟೆಗಳ ಮಾತುಕತೆಯ ಬಳಿಕ ಎಸ್’ಎಎಫ್- ಸೂಡಾನ್ ಸಶಸ್ತ್ರ ಪಡೆ ಮತ್ತು ಆರ್ ಎಸ್ಎಫ್- ಕ್ಷಿಪ್ರ ಸಹಾಯಕ ಪಡೆಗಳ ಜನರಲ್ ಗಳು ಕದನ ವಿರಾಮಕ್ಕೆ ಒಪ್ಪಿದ್ದು, ಏಪ್ರಿಲ್ 24ರ ಮಧ್ಯ ರಾತ್ರಿಯಿಂದಲೇ ಅದು ಜಾರಿಗೊಂಡಿದೆ” ಎಂದು ಬ್ಲಿಂಕೆನ್ ತಿಳಿಸಿದರು.


ಸೇನಾ ಮುಖ್ಯಸ್ಥ ಅಬ್ದೆಲ್ ಫತಾ ಅಲ್ ಬುರ್ಹಾನ್ ಮತ್ತು ಪ್ಯಾರಾ ಮಿಲಿಟರಿಯ ಜನರಲ್ ಮುಹಮದ್ ಹಮ್ದಾನ್ ಡಗ್ಲೋ ಕದನ ವಿರಾಮಕ್ಕೆ ಸಹಿ ಹಾಕಿದರು.
ಹಿಂದಿನ ಅಧ್ಯಕ್ಷರಾದ ಉಮರ್ ಅಲ್ ಬಶರ್ ಮೇಲೆ ಯುದ್ಧಾಪರಾಧ ಹೊರಿಸಿದ ಮೇಲೆ ಸೂಡಾನಿನಲ್ಲಿ ಸೇನಾ ತಿಕ್ಕಾಟ ತೀವ್ರವಾಗಿದೆ. ರಾಜಧಾನಿ ಕಾರ್ಟೂಮ್ ನ ಈಜಿಪ್ತ್ ರಾಯಭಾರ ಕಚೇರಿಯ ಆಡಳಿತಾಧಿಕಾರಿ ಸತ್ತಿದ್ದು, ಕಚೇರಿಯನ್ನು ಸದ್ಯಕ್ಕೆ ಮುಚ್ಚುವ ಪ್ರಕ್ರಿಯೆ ನಡೆದಿದೆ. 4,000 ಜನರು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಪಾಶ್ಚಾತ್ಯ ದೇಶಗಳು ತುರ್ತು ಸಹಾಯ ಮತ್ತು ವಿದೇಶೀಯರ ತೆರವು ಕಾರ್ಯವನ್ನು ಆರಂಭಿಸಿವೆ.

- Advertisement -


ಆದರೆ ಬಡ ಸೂಡಾನಿಗರು ಓಡುವಂತೆಯೂ ಇಲ್ಲ; ಇರುವಂತೆಯೂ ಇಲ್ಲ ಎಂಬಂತಾಗಿದ್ದಾರೆ. ಎಲ್ಲ ಕೊರತೆಗಳ ನಡುವೆ ವಿಶ್ವ ಸಂಸ್ಥೆ ಪರಿಹಾರ ಕಾರ್ಯ ಆರಂಭಿಸಿದೆ.
“ಶವಾಗಾರ, ಆಸ್ಪತ್ರೆ ತುಂಬಿವೆ, ಶವಗಳು ರಸ್ತೆಗಳಲ್ಲೂ ಬಿದ್ದಿವೆ” ಎಂದು ವೈದ್ಯರ ಒಕ್ಕೂಟದ ಅತಿಯಾ ಅಬ್ದಲ್ಲಾ ಹೇಳಿದರು.
ಏಪ್ರಿಲ್ 25ರ ಮಂಗಳವಾರ ಬ್ರಿಟನ್ ಮನವಿ ಮೇರೆಗೆ ಸೂಡಾನ್ ಸಮಸ್ಯೆ ಬಗೆಗೆ ವಿಶ್ವ ಸಂಸ್ಥೆಯಲ್ಲಿ ಸಮಾಲೋಚನಾ ಸಭೆ ನಡೆದಿದೆ.

Join Whatsapp