ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದರೂ ಶೇಕಡ 40ರಷ್ಟು ಕಮಿಷನ್ ಕೊಡಬೇಕಾಗುತ್ತದೆ. ಈ ಬಗ್ಗೆ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದೆವು. ಯಡಿಯೂರಪ್ಪ ನಮ್ಮ ಪತ್ರಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ಆರ್ ಎಸ್ ಎಸ್ ಮುಖಂಡ ಬಿ. ಎಲ್. ಸಂತೋಷ್ ಅವರಿಗೂ ತಿಳಿಸಿದ್ದೆವು. ಆದರೂ ಪ್ರಯೋಜನವಾಗಲಿಲ್ಲ. ಬಳಿಕ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದೆವು ಎಂದು ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನ್ ದಂಧೆಯಿಂದಾಗಿ ಗುತ್ತಿಗೆದಾರರಿಗೆ ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರವು ಸಹ ನಮ್ಮ ಈ ವಿಚಾರದ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸೆದೆವು. ಆದರೆ ನಮಗೆ ಭೇಟಿಗೆ ಅವಕಾಶವೇ ಸಿಗಲಿಲ್ಲ. ರಾಜ್ಯಪಾಲರ ಬಳಿಯೂ ದೂರನ್ನು ತೆಗೆದುಕೊಂಡು ಹೋದೆವು . ಪಿಡಬ್ಲ್ಯೂಡಿ ಸಚಿವರ ಪ್ರಸ್ತಾಪಿಸಿದಾಗ ಅವರು ಅದರಲ್ಲಿ ಭ್ರಷ್ಟಾಚಾರ ಬಗ್ಗೆ ಹೇಳಬಾರದಿತ್ತು ಎಂದು ಸಮಜಾಯಿಷಿ ನೀಡಿದರು ಎಂದರು.
ಸ್ಥಳೀಯ ಕಾಂಟ್ರಾಕ್ಟರ್ ದಾರರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಪ್ಯಾಕೇಜ್ ಸಿಸ್ಟಮ್ ತಂದಿರುವುದರಿಂದ ಸ್ಥಳೀಯ ಕಾಂಟ್ರಾಕ್ಟರ್ ಗೆ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡುತ್ತಿಲ್ಲ. ಜನವರಿಯಲ್ಲಿ ನಾವು ಬೃಹತ್ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆ ನಡೆಸಬೇಕು. ಯಾರು ಎಲ್ಲಿ, ಹೇಗೆ ಕಮಿಷನ್ ಸಂಗ್ರಹ ಮಾಡುತ್ತಿದ್ದರು ಎಂದು ನಾವು ಹೇಳಲು ಸಿದ್ಧವಿದ್ದೇವೆ ಎಂದು ಡಿ ಕೆಂಪಣ್ಣ ತಿಳಿಸಿದರು.
ಬೆಂಗಳೂರು ನಗರದಲ್ಲಿ 20 ಸಾವಿರ ಕೋಟಿ ಕಾಮಗಾರಿ ಆಗಿದೆ. ಯಾವುದರಲ್ಲಿ ಎಷ್ಟು ಕ್ವಾಲಿಟಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಅಧಿಕಾರಿಗಳು ಕೂಡ ಪಾಲುದಾರರಾಗಿದ್ದಾರೆ. ನಮ್ಮಿಂದ ಮಾತ್ರ ವ್ಯವಸ್ಥೆ ಹಾಳಾಗಿಲ್ಲ, ಅಧಿಕಾರಿಗಳು ಇದ್ದಾರೆ. ದಾಖಲೆ ಇಲ್ಲದೆ ಮಾತನಾಡುತ್ತಿಲ್ಲ, ಸಾಬೀತು ಮಾಡುತ್ತೇವೆ. ಮುಖ್ಯಮಂತ್ರಿ ತಮ್ಮನ್ನು ಚರ್ಚೆಗೆ ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಭ್ರಷ್ಟಾಚಾರ ನಿಗ್ರಹಿಸುವಂತೆ ಆಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರಲು ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 1 ಲಕ್ಷ ಗುತ್ತಿಗೆದಾರರ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು.
ಹಲವು ವರ್ಷಗಳಿಂದ ಭ್ರಷ್ಟಾಚಾರ ಕೊನೆಗಾಣಿಸುವಂತೆ ಎಲ್ಲ ಸರಕಾರಗಳಿಗೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟದ ಹಾದಿ ಅನಿವಾರ್ಯ ಎಂದರು.
ಟೆಂಡರ್ ನಲ್ಲಿನ ಭ್ರಷ್ಟಾಚಾರ ಕುರಿತ ತನಿಖೆಗೆ ಸರ್ಕಾರ ಅದೇಶ ನೀಡಿರುವುದು ಸ್ವಾಗತಾರ್ಹ. ಸರಕಾರಗಳು ಬದಲಾದಂತೆ ಭ್ರಷ್ಟಾಚಾರ ಕಡಿಮೆಯಾಗಬೇಕು. ಆದರೆ ಬೆಲೆಗಳು ಏರಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಇದರಿಂದ ಕಾಮಗಾರಿಗಳ ಗುಣಮಟ್ಟ ಕುಸಿಯುತ್ತಿದ್ದು, ಜತೆಗೆ ಗುತ್ತಿಗೆದಾರರು ಸಂಕಷ್ಟಕ್ಕೀಡಾಗಲು ಇದೇ ಪ್ರಮುಖ ಕಾರಣವಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ ಮತ್ತು ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಮಗಾರಿಗಳಿಗೆ ಮಂಜೂರಾಗುವ ಒಟ್ಟು ಅನುದಾನದಲ್ಲಿ ಶೇ.30-40ಕ್ಕಿಂತಲೂ ಹೆಚ್ಚು ಮೊತ್ತ ಭ್ರಷ್ಟಾಚಾರ ಮತ್ತಿತರ ವೆಚ್ಚಗಳಿಗೆ ಸರಿದೂಗಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಟೆಂಡರ್ ಅನುಮೋದನೆಗೂ ಮುನ್ನ ಆರಂಭವಾಗುವ ಭ್ರಷ್ಟಾಚಾರ ಪ್ರಕ್ರಿಯೆ, ಬಿಲ್ ಪಾವತಿ ಅಗುವವರೆಗೆ ಮುಂದುವರಿಯುತ್ತಲೇ ಇರುತ್ತದೆ. ಆದ್ದರಿಂದ ಡಿಸೆಂಬರ್ 8 ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರಕಾರವನ್ನು ಎಚ್ಚರಿಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಒಕ್ಕೊರಲ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಹೋರಾಟಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭ್ರಷ್ಟಾಚಾರ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ. ಎರಡು ದಶಕಗಳ ಹಿಂದೆ ಇದ್ದ ಭ್ರಷ್ಟಾಚಾರ ಇಂದು ಮಿತಿ ಮೀರಿದೆ. ಸರಕಾರಗಳು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿವೆ. ಯಾವ ಸರ್ಕಾರವೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಒಂದು ವೇಳೆ ಸರಕಾರ ಮಾತುಕತೆಗೆ ಆಹ್ವಾನಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದರೆ ಇಡೀ ರಾಜ್ಯದ ಗುತ್ತಿಗೆದಾರರು ಮತ್ತು ಕಾರ್ಮಿಕರು ಸರಕಾರಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಹೇಳಿದರು,
ಬೆರಳೆಣಿಕೆಯಷ್ಟು ಉದಾಹರಣೆಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿ ವರ್ಗ ಹೇಗೆ ಭ್ರಷ್ಟಾಚಾರದ ಆಕರವಾಗಿದೆ ಎಂದು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಎರಡು ವಾರಗಳ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಭ್ರಷ್ಟಾಚಾರ ಕುರಿತು ವಿವರಣೆ ನೀಡಲಾಗಿದೆ. ಅವರು ಸರಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಭ್ರಷ್ಟಾಚಾರ ಕುರಿತು ಪತ್ರ ಬರೆಯಲಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದೇವೆ. ಎಲ್ಲ 224 ಶಾಸಕರಿಗೂ ಪತ್ರ ಬರೆದು ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದರು.
ಭ್ರಷ್ಟಾಚಾರ, ಲಂಚ, ಕಮೀಷನ್‌ಗೆ ದಾಖಲೆಗಳು ಇರುವುದಿಲ್ಲ ಎನ್ನುವುದು ತಿಳಿದಿದ್ದರೂ ಎಲ್ಲಾ ಸರಕಾರ, ಸಚಿವರು, ಎಲ್ಲ ಪಕ್ಷಗಳ ಶಾಸಕರು ದಾಖಲೆಗಳನ್ನು ಕೇಳುತ್ತಾರೆ. ಇದು ಪಲಾಯನವಾದಿ ತಂತ್ರವಷ್ಟೇ. ಭ್ರಷ್ಟಾಚಾರ ಹಿಂದಿನ ಸರಕಾರದಲ್ಲೂ ಇತ್ತು. ಅದರ ಹಿಂದಿನ ಸರಕಾರದಲ್ಲೂ ಇತ್ತು. ಕೇವಲ ಈ ಸರಕಾರ ಮಾತ್ರ ಹೊಣೆ ಎಂದು ಹೇಳುವುದಿಲ್ಲ. ಆದರೆ ಭ್ರಷ್ಟಾಚಾರದ ಪ್ರಮಾಣ ಸರಕಾರದಿಂದ ಸರಕಾರಕ್ಕೆ, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಮಗಾರಿಗಳು ಕಳಪೆಯಾಗಿದ್ದರೆ, ನಿಗದಿತ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ ಸಾರ್ವಜನಿಕರಿಂದ ಹಿಡಿದು ವಿಧಾನಸೌಧದವರೆಗೆ ಎಲ್ಲರೂ ಗುತ್ತಿಗೆದಾರರನ್ನು ಬಲಿಪಶುಗಳನ್ನಾಗಿ ಮಾಡುತ್ತಾರೆ. ಭ್ರಷ್ಟಾಚಾರದ ಕಾರಣದಿಂದಾಗಿ ಗುಣಮಟ್ಟ ಕಾಪಾಡಿಕೊಳ್ಳಲು ಹೆಣಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾದ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ ಪಾವತಿಗೆ ಹೊಸ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಬೇಕಿದ್ದು ಸರಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಸರಕಾರದ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಗುತ್ತಿಗೆದಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಬಿಜೆಪಿ ವರಿಷ್ಠರನ್ನೂ ಭೇಟಿ ಮಾಡುವ ಉದ್ದೇಶವಿದೆ ಎಂದು ಹೇಳಿದರು,