ಭೋಪಾಲ್: ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸುವ ವೇಳೆ ನೋಡಲು ನೆರೆದಿದ್ದ 30ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿರುವ ದುರಂತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್ ಬಸೋದಾದಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮಗುವನ್ನು ರಕ್ಷಿಸಲು ಸುತ್ತಲೂ ನೆರೆದಿದ್ದ ಭಾರಿ ಜನಸಮೂಹದ ಭಾರದಿಂದಾಗಿ ಬಾವಿಯ ತಡೆಗೋಡೆ ಕುಸಿದು 30ಕ್ಕೂ ಹೆಚ್ಚು ಜನ 50 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.
ಘಟನೆ ನಡೆದ ಪ್ರದೇಶದಿಂದ ಈಗಾಗಲೇ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ದುರಂತ ಸಂಭವಿಸಿ ಎಷ್ಟು ಜನ ಬಾವಿಯೊಳಗೆ ಬಿದ್ದಿದ್ದಾರೆಂದು ಅಧಿಕೃತವಾಗಿ ಹೇಳಲು ಸಾಧ್ಯವಾಗಿಲ್ಲ. ಒಂದು ಅಂದಾಜು ಪ್ರಕಾರ ಸುಮಾರು ಹನ್ನೆರಡಕ್ಕೂ ಹೆಚ್ಚು ಜನ ಬಾವಿಯೊಳಗೆ ಒಳಗೆ ಸಿಲುಕಿದ್ದು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವರದಿಯಾಗಿದೆ.
50 ಅಡಿ ಆಳದ ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ, ರಕ್ಷಣಾ ಕಾರ್ಯಾಚರಣೆ ನೋಡಲು ಅಧಿಕ ಸಂಖ್ಯೆಯಲ್ಲಿ ಜನರು ಬಾವಿಯ ಸುತ್ತಲೂ ನಿಂತುಕೊಂಡಿದ್ದರು. ಈ ವೇಳೆ ಬಾವಿಯ ಗೋಡೆ ಕುಸಿದ ಪರಿಣಾಮ ಸುಮಾರು 30 ಗ್ರಾಮಸ್ಥರು ಏಕಾಏಕಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಸುಮಾರು 20 ಅಡಿಗಳಷ್ಟು ನೀರಿದೆ.
“ಘಟನಾ ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಬಾವಿಗೆ ಬಿದ್ದಿರುವ ಜನರನ್ನು ರಕ್ಷಿಸುವಲ್ಲಿ ರಕ್ಷಣಾ ತಂಡಗಳು ತೊಡಗಿವೆ “ಎಂದು ರಾತ್ರಿಯಿಡೀ ಸ್ಥಳದಲ್ಲಿದ್ದ ವಿದಿಶಾ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವಸ್ ಸಾರಂಗ್ ಹೇಳಿದ್ದಾರೆ.
ಘಟನೆಯಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50,000 ಪರಿಹಾರ ನೀಡಿ, ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಘೋಷಿಸಿದ್ದಾರೆ.