ಸೌದಿ ಅರೇಬಿಯಾ : ಮಕ್ಕಾ ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸಲಾಗುತ್ತಿದೆ. ಇದರ ಭಾಗವಾಗಿ ಸರಕಾರಿ ಸೇವೆಗಳನ್ನು ಇ-ನೆಟ್ವರ್ಕ್ ಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ಯೋಜನೆಯ ಭಾಗವಾಗಿ ಸುಮಾರು 7000 ಸ್ಥಳೀಯರಿಗೆ ಉದ್ಯೋಗ ತರಬೇತಿ ನೀಡಲಾಗುವುದು. ಮಕ್ಕಾ ಮತ್ತು ಅದರ ಪವಿತ್ರ ತಾಣಗಳನ್ನು ಸಂಪರ್ಕಿಸುವ ಸ್ಮಾರ್ಟ್ ಮಕ್ಕಾ ಯೋಜನೆಯನ್ನು ಪ್ರಾರಂಭಿಸುವುದಾಗಿ ಮಕ್ಕಾ ಗವರ್ನರ್ ಕಳೆದ ವರ್ಷ ಘೋಷಿಸಿದ್ದರು.
ಸ್ಮಾರ್ಟ್ ಮಕ್ಕಾ ಯೋಜನೆಯು ಮಕ್ಕಾ ಮತ್ತು ಅದರ ಪವಿತ್ರ ತಾಣಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಶ್ವ ದರ್ಜೆಯ ಸೌಲಭ್ಯಗಳಾಗಿ ಪರಿವರ್ತಿಸುವುದಾಗಿದೆ. ಭವಿಷ್ಯದಲ್ಲಿ ಪವಿತ್ರ ತಾಣಗಳನ್ನು ಪೂರ್ಣ ಪ್ರಮಾಣದ ಇ-ಸಿಸ್ಟಮ್ ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಭಾಗವಾಗಿ ಇಲೆಕ್ಟ್ರಿಸಿಟಿ ಯೋಜನೆ ಈಗಾಗಲೇ ಪ್ರಾರಂಭವಾಗಿದೆ. ಇದರ ಫಲವಾಗಿ ಈಗ ಸರಕಾರಿ ಸೇವೆಗಳನ್ನು ತನ್ನ ಎಲೆಕ್ಟ್ರೋನಿಕ್ ನೆಟ್ವರ್ಕ್ ಗೆ ಸಂಪರ್ಕಿಸಲು ತಯಾರಿ ನಡೆಸುತ್ತಿದೆ.
ಕಮ್ಯೂನಿಕೆಶನ್ಸ್, ಐಟಿ ಸಚಿವಾಲಯ, ಸೌದಿ ಡೇಟಾ ಮತ್ತು ಎಐ ಪ್ರಾಧಿಕಾರದ ಜೊತೆಗೆ ವಿವಿಧ ಸರಕಾರಿ ಕಂಪೆನಿಗಳು ಮತ್ತು ಏಜನ್ಸಿಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಯೋಜನೆಯು ಮಕ್ಕಾ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಕಾರ್ಮಿಕ ಪದ್ಧತಿಗಳನ್ನು ಸುಧಾರಿಸುವುದು, ಆಡಿಟಿಂಗ್, ಡಾಟಾ ಮೇಲ್ವಿಚಾರಣೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು 7,000 ಸ್ಥಳೀಯ ಯುವಕ ಯುವತಿಯರಿಗೆ ತರಬೇತಿ ನೀಡಲಾಗುವುದು.