ವಿಶ್ವಗುರು ಆಗಲು ಹೊರಟವರು ವಾಸ್ತವತೆಗೆ ಮರಳಲು ಇದು ಸಕಾಲ!

Prasthutha|

-ಎಸ್.ಕೆ.ಮಠ

- Advertisement -

ದೇಶದ ಸದ್ಯದ ಅತ್ಯಂತ ಕೆಟ್ಟ ಪರಿಸ್ಥಿತಿ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಭಾರತವನ್ನು ವಿಶ್ವಗುರು ಮಾಡುವವರ ಬಂಡವಾಳವನ್ನು ಕೋವಿಡ್-19 ಸೋಂಕು ವಿಶ್ವದ ಮುಂದೆ ಬಹಿರಂಗಗೊಳಿಸಿದೆ. ಮಾತೆತ್ತಿದರೆ ಆತ್ಮನಿರ್ಭರ, ಅಚ್ಚೇದಿನ್, ವಿಶ್ವಗುರು ಮುಂತಾದ ಪದಪುಂಜಗಳನ್ನು ಪುಂಖಾನುಪುಂಖವಾಗಿ ಹೊರಡಿಸುತ್ತಿದ್ದವರ ಶಂಖ ಖಾಲಿಯಾಗಿ ಮಕಾಡೆ ಮಲಗಿದೆ. ಅಧಿಕಾರ ನಡೆಸುವವರ ಹುಳುಕುಗಳು, ದೌರ್ಬಲ್ಯ, ವೈಫಲ್ಯ, ಮೊಂಡುತನ, ದಾರ್ಷ್ಟ್ಯತನವನ್ನು ಸೂಕ್ಷ್ಮ ಜೀವಿಯೊಂದು ಬಟಾಬಯಲುಗೊಳಿಸಿದೆ.

ಕೋವಿಡ್-19 ಮೊದಲ ಅಲೆ ಕಳೆದ ವರ್ಷಾಂತ್ಯದ ವೇಳೆ ದೇಶದ ಮೇಲೆ ಅಪ್ಪಳಿಸಿದಾಗ ಸಿದ್ಧತೆ ಮತ್ತು ಮಾಹಿತಿಯ ಕೊರತೆಯಿಂದ ಸಮರ್ಥವಾಗಿ ಎದುರಿಸಲಾಗಲಿಲ್ಲ ಎಂಬ ಸಬೂಬು ನೀಡಿದರೂ ಎರಡನೇ ಅಲೆ ಬಂದೆರೆದಾಗ ಇದೇ ಕಾರಣವನ್ನು ಮುಂದಿಟ್ಟುಕೊಂಡು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ತಜ್ಞರ ಸಮಿತಿಯ ಶಿಫಾರಸ್ಸಿನ ಬಗ್ಗೆ ನಿರ್ಲಕ್ಷ್ಯ ತೋರಿ ವರದಿಯನ್ನು ಮೂಲೆಗುಂಪು ಮಾಡಿದ ಸರಕಾರದ ಧೋರಣೆಯ ದುಷ್ಪರಿಣಾಮವನ್ನು ಇಂದು ದೇಶದ ಜನತೆ ಎದುರಿಸುತ್ತಿದ್ದಾರೆ. ಇದು ಅಕ್ಷಮ್ಯ ಕೃತ್ಯ ಮಾತ್ರವಲ್ಲ ಹೊಣೆಗೇಡಿತನದ ಕೃತ್ಯ ಎಂದರೂ ತಪ್ಪಾಗದು.

- Advertisement -

ಆಡಳಿತವೊಂದು ತನ್ನ ಜನರ ಪ್ರಾಣ, ಸಂಪತ್ತು ರಕ್ಷಣೆ ಮಾಡುವಲ್ಲಿ ವಿಫಲರಾದರೆ ಅದರ ನೈತಿಕ ಹೊಣೆಯನ್ನು ಸ್ವಯಂ ಹೊರಬೇಕಾಗುತ್ತದೆ. ಆದರೆ ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿರುವ ಆರೆಸ್ಸೆಸ್ ಕೃಪಾಪೋಷಿತ ಬಿಜೆಪಿ ನೇತತ್ವದ ಸರಕಾರ ಕೋವಿಡ್ ಪೂರ್ವ ಹಾಗೂ ಕೋವಿಡೋತ್ತರದಲ್ಲಿ ನೀಡಿದ ಆಡಳಿತ ಸಂಪೂರ್ಣ ಜನವಿರೋಧಿ ಮತ್ತು ಕೋಮು ಆಧಾರಿತವಾಗಿದೆ. ಹಿಡನ್ ಅಜೆಂಡಾವೊಂದನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುವ ಸರಕಾರವೊಂದರಿಂದ ಇಂತಹ ತಲೆಹಿಡುಕ ನೀತಿಗಳಲ್ಲದೆ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಧಿಕಾರಕ್ಕೇರಿದ ಆರಂಭದಿಂದಲೇ ಸರಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ವೇದ್ಯವಾಗಿದೆ.

ದೇಶದ ಮುಗ್ಧ ಜನರನ್ನು ಭ್ರಮಾಲೋಕದಲ್ಲಿ ತೇಲಾಡಿಸಿ ಅವರ ವಿಶ್ವಾಸಗಳಿಸಿಕೊಂಡ ಬಿಜೆಪಿ ದೇಶವನ್ನು ಅಧೋಗತಿಗೆ ತಳ್ಳಿದೆ. ಸ್ವಾತಂತ್ರ್ಯಾ ನಂತರ ನಿರಂತರವಾಗಿ ಆಡಳಿತ ನಡೆಸಿದ ಕಾಂಗ್ರೆಸ್‌ ನ ಭ್ರಷ್ಟಾಚಾರ ಮತ್ತು ಅಹಂಕಾರದಿಂದ ಬೇಸತ್ತಿದ್ದ ಜನತೆ ಬಿಜೆಪಿಯ ಸುಳ್ಳು ಆಶ್ವಾಸನೆಗಳನ್ನು ಯಾವುದೇ ಪರಾಮರ್ಶೆ ಇಲ್ಲದೆ ನಂಬಿದರು. ಈ ಮೂಲಕ ಕೋಮುವಾದಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಂಸ್ಕೃತಿಕ ಸಂಘಟನೆಯ ಮುಖವಾಡ ಧರಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸರಕಾರದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿತ್ತು. ನಂತರ ಮೋದಿ ನೇತೃತ್ವದ ಕೇಂದ್ರ ಸರಕಾರ, ಆರೆಸ್ಸೆಸ್ ಗರ್ಭಗುಡಿಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಜಾರಿ ಮಾಡುವ ಒಂದು ಸರಕಾರಿ ಯಂತ್ರವಾಗಿ ಮಾತ್ರ ಉಳಿದಿದೆ. ಸಚಿವ ಸಂಪುಟ ಸಭೆ ನಾಮಮಾತ್ರಕ್ಕೆ ನಡೆಯುತ್ತಿದ್ದರೂ ನೈಜ ತೀರ್ಮಾನಗಳು ಸಾಂಸ್ಕೃತಿಕ ಸಂಘದ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ದೇಶದ ಜನತೆ ಇಂದು ಎದುರಿಸುತ್ತಿರುವ ಗಂಡಾಂತರಕ್ಕೆ ಆರೆಸ್ಸೆಸ್ ಕೂಡ ನೇರ ಕಾರಣವಾಗಿದೆ.

ಕೋವಿಡ್-19ನಿಂದ ಸಾವಿರಾರು ಮಂದಿ ದಿನಂಪ್ರತಿ ಸಾಯುತ್ತಿರುವ ಸಂದರ್ಭದಲ್ಲೇ ಹಿಂದುತ್ವ ಗೂಂಡಾ ಪಡೆ ಹರ್ಯಾಣದಲ್ಲಿ ಆಸಿಫ್ ಖಾನ್ ಎಂಬ ಮುಸ್ಲಿಮ್ ಯುವಕನನ್ನು ಗುಂಪು ಹತ್ಯೆ ಮಾಡಿರುವುದು, ಉತ್ತರ ಪ್ರದೇಶ ಸರಕಾರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಶತಮಾನದಷ್ಟು ಹಳೆಯದಾದ ಬಾರಬಂಕಿ ಮಸೀದಿಯನ್ನು ಧ್ವಂಸಗೈಯ್ದಿರುವುದು ಹೆಚ್ಚಿನ ಚರ್ಚೆಗೆ ಒಳಗಾಗಿಲ್ಲ. ಎಂದಿನಂತೆ ಹೆಚ್ಚಿನ ಮಾಧ್ಯಮಗಳು ಈ ವಿಷಯಗಳಲ್ಲಿ ಕೂಡ ತನ್ನ ದಿವ್ಯ ಮೌನವನ್ನು ವಹಿಸಿವೆ.

    ಕಳೆದ 70 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನದೇ ಆದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಂಡು ಬಂದಿದೆ. ತನ್ನ ವಿದೇಶಾಂಗ ನೀತಿ, ಮಾನವೀಯ ನೆರವು, ಮಾನವ ಹಕ್ಕುಗಳ ರಕ್ಷಣೆ ಮುಂತಾದ ವಿಷಯಗಳಲ್ಲಿ ಇದುವರೆಗೆ ದೇಶ ಆಳಿದ ಪಕ್ಷಗಳು ತೆಗೆದುಕೊಂಡ ನಿಲುವುಗಳು ದೇಶದ ಗೌರವವನ್ನು ಜಾಗತಿಕವಾಗಿ ಹೆಚ್ಚಿಸಿತ್ತು. ಅಂತಾರಾಷ್ಟ್ರೀಯ ವಿಷಯಗಳಲ್ಲಿ ಕೈಗೊಳ್ಳುವ ನಿಲುವುಗಳು ಆ ದೇಶದ ಒಟ್ಟು ಜನರ ನಿಲುವಾಗಿರುವುದರಿಂದ ಇದುವರೆಗಿನ ಸರಕಾರಗಳು ಬಹಳ ಸೂಕ್ಷ್ಮವಾಗಿ ಮುಂದಡಿ ಇಡುತ್ತಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಿದೇಶಾಂಗ ನೀತಿಯಲ್ಲಿಯೂ ಬದಲಾವಣೆಯಾಗಿದ್ದು, ಇದರಿಂದ ದೇಶಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ನೆರೆಯ ದೇಶಗಳೊಂದಿಗೆ ಇದ್ದ ಸೌಹಾರ್ದ ಸಂಬಂಧಕ್ಕೆ ಕೊಳ್ಳಿ ಇಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಹಲವು ದೇಶಗಳಿಗೆ ನೀಡಿದ ಭೇಟಿ ಕೇವಲ ಒಂದು ನಿಷ್ಟ್ರಯೋಜಕ ಪ್ರವಾಸವಾಗಿತ್ತೇ ವಿನಃ ಅದರಿಂದ ದೇಶಕ್ಕೆ ಹೇಳಿಕೊಳ್ಳುವಂತಹ ಲಾಭ ಉಂಟಾಗಿಲ್ಲ. ಪ್ರವಾಸದ ಮೂಲಕ ಮೋದಿ ತನ್ನ ವರ್ಚಸ್ಸನ್ನು ಹೆಚ್ಚಿಸಲು ಪ್ರಯತ್ನಿಸಿದರೇ ಹೊರತು ದೇಶದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಅಮೆರಿಕದಲ್ಲಿ ನಡೆದ ಟ್ರಂಪ್ ಪರ ಚುನಾವಣಾ ಪ್ರಚಾರದ ದೇಶದ ಗೌರವ ಮಣ್ಣು ಪಾಲಾಯಿತು. ದೇಶವೊಂದರ ಪ್ರಧಾನಿ ಮತ್ತೊಂದು ದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ನಡೆಸುವ ಮೂಲಕ ಭಾರತ ಇದುವರೆಗೆ ಕಾಪಾಡಿಕೊಂಡು ಬಂದಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದರು. ಈ ಮೂಲಕ ಭಾರತೀಯರ ಗೌರವವನ್ನೂ ಕುಗ್ಗಿಸಿದರು. ಇದೀಗ ಕೊರೊನಾ ನಿರ್ವಹಣೆಯ ವೈಫಲ್ಯದಿಂದ ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ತೀವ್ರ ಟೀಕೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ದಿ ಗಾರ್ಡಿಯನ್, ಟೈಮ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳು ಕೊರೊನಾ ನಿರ್ವಹಣೆಯ ವೈಫಲ್ಯಕ್ಕೆ ಮೋದಿಯೆಡೆಗೆ ಬೊಟ್ಟು ಮಾಡಿ ತೀವ್ರವಾಗಿ ಟೀಕಿಸಿವೆ.

ಭಾರತದ ಬಹುತೇಕ ಮಾಧ್ಯಮಗಳು ಮೋದಿ-ಅಮಿತ್ ಶಾ ತಾಳಕ್ಕೆ ಕುಣಿಯುತ್ತಿರುವಾಗ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಎತ್ತಿ ತೋರಿಸುತ್ತಿವೆ. ಇದೇ ವೇಳೆ ಕೊರೊನಾ ನಿರ್ವಹಣೆಯ ವೈಫಲ್ಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸು ಕೂಡ ಕುಸಿದಿದೆ. ಮೋದಿಯವರ ಜನಪ್ರಿಯತೆ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಹಾಗೂ ಭಾರತದ ಸಿ-ವೋಟರ್ ನಡೆಸಿರುವ ಸಮೀಕ್ಷೆಗಳು ಹೇಳಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಆಕ್ರೋಶ ಮತ್ತು ಅವರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಕೂಡ ಬಿಜೆಪಿ ವಿರುದ್ಧವಾಗಿಯೇ ಇರುವುದನ್ನು ಗಮನಿಸಿದರೆ ಸರಕಾರದ ವರ್ಚಸ್ಸು ಕೂಡ ಕುಸಿದಿರುವುದು ಸ್ಪಷ್ಟವಾಗುತ್ತಿದೆ. ಆದರೆ ಇವು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಸರಕಾರದ ವಿರುದ್ಧ ಧ್ವನಿ ಎತ್ತಿದವರನ್ನು, ಟೀಕಿಸಿದವನು ದೇಶದ್ರೋಹಿಗಳು ಎಂದು ಕರೆಯುವ ಮಟ್ಟಿಗೆ ತಲುಪಿರುವುದು ಅದರ ಬೇಜವಾಬ್ದಾರಿಗೆ ನಡೆಗೆ ಹಿಡಿದ ಕೈಗನ್ನಡಿಯಾಗಿದೆ.

ತನ್ನ ಸುತ್ತಮುತ್ತ ಹೊಗಳು ಭಟರನ್ನು ತುಂಬಿಸಿಕೊಂಡು ಭ್ರಮಾಲೋಕದಲ್ಲಿ ಬದುಕುತ್ತಿರುವ ಮೋದಿ ಮತ್ತು ತಂಡ ಅದರಿಂದ ಹೊರಬಂದು ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ವಿಶ್ವಗುರು ಆಗಲು ಹೊರಟವರು ನದಿಗಳಲ್ಲಿ ಶವಗಳು ತೇಲಿಬರುತ್ತಿರುವ ವಾಸ್ತವಿಕತೆಯನ್ನು ಅರಿಯಬೇಕು. ವಿದೇಶಿ ಮಾಧ್ಯಮಗಳು ದೇಶದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂಬ ಪೂರ್ವಗ್ರಹದಿಂದ ಹೊರಬಂದು ನಿಜವಾಗಿಯೂ ದೇಶದ ಜನರನ್ನು ಕೊರೊನಾ ಬಿಕ್ಕಟ್ಟಿನಿಂದ ಹೊರತರಲು ಪ್ರಯತ್ನಿಸಬೇಕು. ಇದು ಸದ್ಯದ ದೇಶದ ಬೇಡಿಕೆಯಾಗಿದೆ.

Join Whatsapp