ವೈದ್ಯರ ಮುಷ್ಕರ ಕಾನೂನುಬಾಹಿರ ಎಂದ ಹೈಕೋರ್ಟ್: 3000 ವೈದ್ಯರ ರಾಜೀನಾಮೆ

Prasthutha|

ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಮಧ್ಯಪ್ರದೇಶ ಹೈಕೋರ್ಟ್ “ಕಾನೂನುಬಾಹಿರ” ಎಂದು ಹೇಳಿದ ನಂತರ ಸುಮಾರು 3000ಕ್ಕೂ ಅಧಿಕ ಕಿರಿಯ ವೈದ್ಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕಿರಿಯ ವೈದ್ಯರು ಸ್ಟೈಪೆಂಡ್ ಹೆಚ್ಚಳ ಮತ್ತು ವೈದ್ಯರು ಮತ್ತು ಕುಟುಂಬ ಸದಸ್ಯರಿಗೆ ಉಚಿತ ಕೋವಿಡ್ ಚಿಕಿತ್ಸೆಯಂತಹ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರದಿಂದ ಮುಷ್ಕರ ಆರಂಭಿಸಿದ್ದರು.

- Advertisement -

ಮಧ್ಯಪ್ರದೇಶ ಸರ್ಕಾರವು ಮೇ 6 ರಂದು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಈ ಸಂಬಂಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಭೋಪಾಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧ್ಯಪ್ರದೇಶದ ವೈದ್ಯಕೀಯ ಆಯುಕ್ತ ನಿಶಾಂತ್ ವಾರ್ವಾಡೆ, ವೈದ್ಯರ ಸ್ಟೈಫಂಡ್ನಲ್ಲಿ ಶೇಕಡಾ 17ರಷ್ಟು ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ. ಇದರ ಜಾರಿಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಆದರೆ ಇದಕ್ಕೆ ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘ (ಎಂಪಿಜೆಡಿಎ) ಅಧ್ಯಕ್ಷ ಡಾ.ಅರವಿಂದ್ ಮೀನಾ ಪ್ರತಿಕ್ರಿಯಿಸಿ, “ಸ್ಟೈಫಂಡ್ ಅನ್ನು ಶೇಕಡಾ 24 ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದ್ದರಿಂದ ಈ ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಗುರುವಾರ, ಮಧ್ಯಪ್ರದೇಶ ಹೈಕೋರ್ಟ್ ವೈದ್ಯರ ಮುಷ್ಕರವನ್ನು “ಕಾನೂನುಬಾಹಿರ” ಎಂದು ತೀರ್ಪು ನೀಡಿದ್ದು, ಎಲ್ಲಾ ವೈದ್ಯರು 24 ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿತ್ತು.

- Advertisement -

ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ರಫೀಕ್ ಅಹ್ಮದ್ ಮತ್ತು ನ್ಯಾಯಮೂರ್ತಿ ಸುಜೋಯ್ ಪಾಲ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ,  24 ಗಂಟೆಗಳಲ್ಲಿ ವೈದ್ಯರು ತಮ್ಮ ಹುದ್ದೆಗಳಿಗೆ ಮರಳದಿದ್ದರೆ, ಅವರ ವಿರುದ್ಧ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದ್ದರು. ಮುಷ್ಕರವನ್ನು ನಿಲ್ಲಿಸಲು ಪೊಲೀಸರನ್ನು ವೈದ್ಯರ ಮನೆಗಳಿಗೆ ಕಳುಹಿಸಲಾಗಿದೆ ಎಂದು ವೈದ್ಯರ ಸಂಘಟನೆ ಆರೋಪಿಸಿದೆ

Join Whatsapp