ರೈತ ಹೋರಾಟದಲ್ಲಿ ಪಾಲ್ಗೊಂಡ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್

Prasthutha|

►► ಕರಾಳ ಕೃಷಿ ಕಾನೂನು ಹಿಂದೆಗೆಯದಿದ್ದರೆ ಪ್ರಶಸ್ತಿ ಹಿಂದಿರುಗಿಸುವ ಬೆದರಿಕೆ

- Advertisement -

2008ರ ಒಲಿಂಪಿಕ್ ನಲ್ಲಿ ತಾಮ್ರದ ಪದಕ ಗೆದ್ದ ವಿಜೇಂದರ್ ಸಿಂಗ್ ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕರಾಳ ಕೃಷಿ ಕಾನೂನನ್ನು ಕೇಂದ್ರ ಸರಕಾರ ಹಿಂಪಡೆಯದಿದ್ದರೆ ಭಾರತದ ಶ್ರೇಷ್ಠ ಕ್ರೀಡಾ ಗೌರವ ‘ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್’  ಹಿಂದಿರುಗಿಸುವುದಾಗಿ ಅವರು ಘೋಷಿಸಿದ್ದಾರೆ.

“ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದ ಕಾರಣಕ್ಕಾಗಿ ನನಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ ರೈತರನ್ನು ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ಸ್ವೀಕಾರಾರ್ಹವಲ್ಲ. ಹಾಗಾಗಿ ಪ್ರಶಸ್ತಿ ಮತ್ತು ಪ್ರಶಸ್ತಿಯೊಂದಿಗೆ ದೊರೆತ ಇತರ ಎಲ್ಲಾ ಪ್ರಯೋಜನಗಳನ್ನು ಪ್ರತಿಭಟನೆಯಾಗಿ ಹಿಂದುರುಗಿಸಲಿದ್ದೇನೆ” ಎಂದು ವಿಜೇಂದರ್ ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

- Advertisement -

“ರೈತರ ಬೇಡಿಕೆಗಳನ್ನು ಸರಕಾರ ಆಲಿಸುತ್ತದೆ ಮತ್ತು ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಿದೆಯೆಂದು ನಾನು ಭಾವಿಸುತ್ತೇನೆ. ಇಲ್ಲದೆ ಇದ್ದರೆ ಪ್ರತಿಭಟನೆಯು ರಾಷ್ಟ್ರವ್ಯಾಪಿಯಾಗಲಿದೆ. ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಕೊಡುಗೆಯನ್ನು ನೀಡುವಂತೆ ಎಲ್ಲಾ ಕ್ರೀಡಾಪಟುಗಳಿಗೆ ನಾನು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು.

“ನಾನು ಪಂಜಾಬ್ ನಲ್ಲಿ ತರಬೇತಿ ಪಡೆದಿದ್ದೆ ಮತ್ತು ಅವರ ರೊಟ್ಟಿ ತಿಂದಿದ್ದೆ. ಈಗ ಅವರು ಇಲ್ಲಿ ಚಳಿಯಲ್ಲಿರುವಾಗ ನಾನು ಅವರ ಸಹೋದರನಾಗಿ ಬಂದಿದ್ದೇನೆ” ಎಂದು ಅವರು ಹೇಳಿದರು.

ಬಾಕ್ಸಿಂಗ್ ನಲ್ಲಿ ಮೊದಲ ಒಲಿಂಪಿಕ್ ಪದಕ ತಂದುಕೊಟ್ಟ ಕಾರಣಕ್ಕಾಗಿ 2009ರಲ್ಲಿ ವಿಜೇಂದರ್ ರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು.



Join Whatsapp