‘ರೈತ ಪರ ಹೋರಾಟಗಾರರ ಖಾತೆ ಅಮಾನತು ಹಿಂಪಡೆದರೆ ಪರಿಣಾಮ ನೆಟ್ಟಗಿರಲ್ಲ’ : ಟ್ವಿಟ್ಟರ್ ಗೆ ಮೋದಿ ಸರಕಾರದ ಬೆದರಿಕೆ !

Prasthutha|

ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದ ದಿ ಕಾರವಾನ್, ಕಿಸಾನ್ ಏಕ್ತಾ ಮೋರ್ಚಾ ಮತ್ತು ಸಿಪಿಐ (ಎಂ) ಪೊಲಿಟ್‌ಬ್ಯುರೊ ಸದಸ್ಯ ಮೊಹಮ್ಮದ್ ಸಲೀಂ ಅವರ ಟ್ವಿಟ್ಟರ್ ಖಾತೆಯ ಅಮಾನತನ್ನು ಹಿಂಪಡೆದ ಟ್ವಿಟ್ಟರ್ ಗೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಐಟಿ ಕಾಯ್ದೆ 69 ಎ ಅಡಿಯಲ್ಲಿ ಕ್ರಮ ಕೈಗೊಳ್ಳದ ಕಾರಣ ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಕೇಂದ್ರ ಸರಕಾರದ ವಿರುದ್ಧದ ಆಂದೋಲನವನ್ನು ತೀವ್ರಗೊಳಿಸುವ ಭಾಗವಾಗಿ ಭಾನುವಾರ ಲೈವ್ ವಿಡಿಯೋ ಹಂಚಿಕೊಂಡ ನಂತರ ‘ಕಿಸಾನ್ ಏಕ್ತಾ ಮೋರ್ಚಾ’ ಖಾತೆ ಕಣ್ಮರೆಯಾಗಿತ್ತು.

- Advertisement -

ಗಣರಾಜ್ಯೋತ್ಸವದ ದಿನದಂದು ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ನಕಲಿ ಸುದ್ದಿಗಳನ್ನು ಹರಡಲಾಗಿದೆ ಎಂದು ಆರೋಪಿಸಿ ಕಾರವಾನ್ ಪತ್ರಿಕೆಯ ಟ್ವಿಟ್ಟರ್ ಖಾತೆಯನ್ನು ಕೂಡ ಅಮಾನತುಗೊಳಿಸಲಾಗಿತ್ತು. ಅಮಾನತುಗೊಳಿಸಲಾಗಿದ್ದ ಖಾತೆಗಳಲ್ಲಿ ಕಾರವಾನ್ ಮ್ಯಾಗಝಿನ್, ಕಿಸಾನ್ ಏಕ್ತಾ ಮೋರ್ಚಾ, ಆದಿವಾಸಿ ನಾಯಕ ಹನ್ಸರಾಜ್ ಮೀನಾ ಮತ್ತು ನಟ ಸುಶಾಂತ್ ಸಿಂಗ್ ಅವರ ಖಾತೆಗಳು ಸೇರಿವೆ. ಈ ಖಾತೆಗಳು ರೈತರ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದವು. ಎಎನ್‌ಐ ವರದಿಯ ಪ್ರಕಾರ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯದ ಸೂಚನೆಯ ಮೇರೆಗೆ ಟ್ವಿಟರ್ ಸುಮಾರು 250 ಟ್ವೀಟ್‌ಗಳು ಮತ್ತು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಿತ್ತು. ಸುಳ್ಳು ಮತ್ತು ಪ್ರಚೋದನಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಐಟಿ ಕಾಯ್ದೆ 69 ಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ವಿವಿಧ ಏಜೆನ್ಸಿಗಳ ಕೋರಿಕೆಯ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ಎಎನ್‌ಐ ವರದಿಯಲ್ಲಿ ತಿಳಿಸಿದೆ.

Join Whatsapp