ನಿಜವಾದ ಜನಸೇವಕ ಎಂದಿಗೂ ಅಹಂಕಾರಿಯಲ್ಲ, ಪ್ರಜೆಗಳಿಗೆ ನೋವಾಗುವಂತೆ ನಡೆದುಕೊಳ್ಳುವುದಿಲ್ಲ: ಮೋದಿಯನ್ನು ತಿವಿದ ಮೋಹನ್ ಭಾಗವತ್

Prasthutha|

ನವದೆಹಲಿ: ನಿಜವಾದ ಸೇವಕ (ಜನರ ಸೇವೆ ಮಾಡುವವನು) ಎಂದಿಗೂ ಅಹಂಕಾರಿಯಲ್ಲ ಮತ್ತು ಇತರರಿಗೆ ಯಾವುದೇ ಹಾನಿಯಾಗದಂತೆ ಕೆಲಸ ಮಾಡುತ್ತಾನೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ. 

- Advertisement -

ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಬಹುಮತದ ಕೊರತೆಯಾಗಿರುವ ಬಗ್ಗೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.

ನಾಗ್ಪುರದಲ್ಲಿ ಆರ್ ಎಸ್ ಎಸ್ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಭಾಗವತ್ ಮಾತನಾಡಿದರು.

- Advertisement -

ನಿಜವಾದ ಸೇವಕನು ಕೆಲಸ ಮಾಡುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳುತ್ತಾನೆ… ಶಿಷ್ಟಾಚಾರವನ್ನು ಕಾಪಾಡಿಕೊಳ್ಳುವವನು ತನ್ನ ಕೆಲಸವನ್ನು ಮಾಡುತ್ತಾನೆ, ಆದರೆ ಅಂಟಿಕೊಳ್ಳದೆ ಉಳಿಯುತ್ತಾನೆ. ನಾನು ಇದನ್ನು ಮಾಡಿದ್ದೇನೆ ಎಂಬ ಅಹಂಕಾರವಿಲ್ಲ. ಅಂತಹ ವ್ಯಕ್ತಿಗೆ ಮಾತ್ರ ಸೇವಕ ಎಂದು ಕರೆಯಲ್ಪಡುವ ಹಕ್ಕಿದೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಒಂದು ಪಕ್ಷವನ್ನು ಸೋಲಿಸಿ ಇನ್ನೊಂದು ಪಕ್ಷವು ಅಧಿಕಾರಕ್ಕೇರಲು ಬಹಳಷ್ಟು ಪೈಪೋಟಿ ನೀಡುತ್ತದೆ. ಇದೆಲ್ಲಾ ಆಗಬೇಕಾದದ್ದೇ. ಸಂಸತ್ತಿನಲ್ಲಿ ಎರಡು ಪಕ್ಷಗಳಿವೆ. ಅದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಅಡಳಿತ ಪಕ್ಷ, ಇನ್ನೊಂದು ಪ್ರತಿಪಕ್ಷ. ಪ್ರತಿಪಕ್ಷವನ್ನು ವಿರೋಧ ಪಕ್ಷ ಎನ್ನುವುದು ಸರಿಯಲ್ಲ. ನನ್ನ ಪ್ರಕಾರ ಅದು ಪ್ರತಿಪಕ್ಷ ಎಂದು ಭಾವಿಸಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.

ಪ್ರತಿಪಕ್ಷಗಳ ಬಗ್ಗೆ ಮಾತನಾಡಿದ ಭಾಗವತ್, ನಾನು ಅದನ್ನು ವಿರೋಧಿ ಪಕ್ಷ ಎಂದು ಕರೆಯುವುದಿಲ್ಲ, ನಾನು ಅದನ್ನು ಪ್ರತಿಪಕ್ಷ ಎಂದು ಕರೆಯುತ್ತೇನೆ. ಪ್ರತಿಪಕ್ಷ ವಿರೋಧಿ ನಹೀ ಹೈ (ಪ್ರತಿಪಕ್ಷಗಳು ಎದುರಾಳಿಯಲ್ಲ). ಇದು ಒಂದು ಬದಿಯನ್ನು ಬಹಿರಂಗಪಡಿಸುತ್ತಿದೆ ಮತ್ತು ಅದನ್ನು ಚರ್ಚಿಸಬೇಕು. ನಾವು ಈ ರೀತಿ ಕಾರ್ಯನಿರ್ವಹಿಸಬೇಕು ಎಂದು ನಾವು ಅರ್ಥಮಾಡಿಕೊಂಡರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಸಭ್ಯತೆಯ ಬಗ್ಗೆ ನಾವು ತಿಳಿದಿರಬೇಕು. ಆ ಶಿಷ್ಟಾಚಾರವನ್ನು ಕಾಪಾಡಿಕೊಳ್ಳಲಾಗಲಿಲ್ಲ.

ಮಣಿಪುರ ಶಾಂತಿಗಾಗಿ ಕಾದು ಒಂದು ವರ್ಷವಾಗಿದೆ, ಕಳೆದ 10 ವರ್ಷಗಳಿಂದ ರಾಜ್ಯವು ಶಾಂತಿಯುತವಾಗಿತ್ತು. ಆದರೆ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಬಂದೂಕು ಸಂಸ್ಕೃತಿ ಹೆಚ್ಚಾಗಿದೆ. ಆದ್ಯತೆಯ ಮೇಲೆ ಇಲ್ಲಿನ ಸಂಘರ್ಷ ಪರಿಹರಿಸುವ ಕೆಲಸವಾಗಬೇಕು ಎಂದು ಅವರು ಹೇಳಿದ್ದಾರೆ. ರಕ್ಷಣಾ ತಂತ್ರ, ಕ್ರೀಡೆ, ಸಂಸ್ಕೃತಿ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ನಾವು ಸವಾಲುಗಳನ್ನು ಎದುರಿಸಿ ದಾಪುಗಾಲು ಹಾಕಿದ್ದೇವೆ. ವಿಶ್ವವೇ ನಮ್ಮೆಡೆಗೆ ತಿರುಗಿ ನೋಡುತ್ತಿದೆ. ನಮಗೆ ಮಣೆ ಹಾಕುತ್ತಿದೆ. ಹಾಗೆಂದ ಮಾತ್ರಕ್ಕೆ ನಾವು ಎಲ್ಲವನ್ನೂ ಜಯಿಸಿದ್ದೇವೆ ಎಂದಲ್ಲ” ಎಂದು ಪರೋಕ್ಷವಾಗಿ ಬಿಜೆಪಿ ಸರಕಾರವನ್ನು ಅವರು ತಿವಿದರು.

Join Whatsapp