ಹೊಸದಿಲ್ಲಿ: ಪತ್ರಕರ್ತ ಸಿದ್ದೀಕ್ ಕಾಪ್ಪನ್ ರನ್ನು ಉತ್ತರ ಪ್ರದೇಶ ಪೊಲೀಸರು ಚಿತ್ರಹಿಂಸೆಗೆ ಗುರಿಪಡಿಸಿದ್ದು, ಸಿ.ಪಿ.ಎಂ ಸಂಸದರು ತನ್ನನ್ನು ಹಥ್ರಾಸ್ ಜಿಲ್ಲೆಗೆ ಕಳುಹಿಸಿದ್ದರು ಎಂದು ಹೇಳಿಕೆ ನೀಡುವಂತೆ ಅವರನ್ನು ಬಲವಂತಪಡಿಸಲಾಗಿದೆ ಎಂದು ಅವರ ಪತ್ನಿ ರೈಹಾನ ಸಿದ್ದೀಕ್ ‘ಮುಸ್ಲಿಮ್ ಮಿರರ್’ಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿಯೊಂದಿಗೆ ಎಷ್ಟು ನಿಕಟವಾಗಿರುವೆ ಮತ್ತು ಕೊನೆಯ ಬಾರಿಗೆ ಯಾವಾಗ ಝಾಕೀರ್ ನಾಯಕ್ ರನ್ನು ಭೇಟಿಯಾಗಿರುವೆ ಎಂದು ಕಾಪ್ಪನ್ ರನ್ನು ಪ್ರಶ್ನಿಸಲಾಗಿದೆ.
ಫೋನ್ ನಲ್ಲಿ ನಡೆದ ಮಾತುಕತೆಯಿಂದ ತಿಳಿದ ವಿಚಾರಗಳನ್ನು ರೈಹಾನ ಬಹಿರಂಗಪಡಿಸಿದ್ದಾರೆ. “ನೀನು ಕೇರಳದ ದನದ ಮಾಂಸ ತಿನ್ನುವ ಮುಸ್ಲಿಂ. ಯುಪಿಯಲ್ಲಿರುವ ದಲಿತರ ಬಗ್ಗೆ ನಿನಗೇಕೆ ಸಹಾನುಭೂತಿ” ಎಂದು ಅವರೊಂದಿಗೆ ಕೇಳಲಾಗಿದೆ ಎಂದು ರೈಹಾನ ತಿಳಿಸಿದ್ದಾರೆ.
ಕಾಪ್ಪನ್ ರನ್ನು ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಅಕ್ಟೋಬರ್ 5ರಂದು ಇತರ ಮೂವರೊಂದಿಗೆ ಬಂಧಿಸಲಾಗಿತ್ತು.
ಅವರ ಬಂಧನದ ಕುರಿತು ತಮಗೆ ತಿಳಿದಿರಲಿಲ್ಲ ಎಂದು ರೈಹಾನ ಹೇಳಿದ್ದಾರೆ. “ನಾವು ತೀವ್ರ ಆತಂಕಕ್ಕೊಳಗಾಗಿದ್ದೆವು. ಆ ದಿನ ಅವರಿಂದ ಕರೆ ಬಂದಿರಲಿಲ್ಲ. ಯಾವಾಗಲೂ ಸಂಜೆಯ ವೇಳೆ ಅವರು ನಮಗೆ ಕರೆ ಮಾಡುತ್ತಿದ್ದರು” ಎಂದು ಆಕೆ ತಿಳಿಸಿದರು.
ಬಂಧನದ ಕುರಿತು ಕುಟುಂಬವು ಮಾರನೆ ದಿನವಷ್ಟೇ ತಿಳಿದಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಒಂದು ತಿಂಗಳ ನಂತರವಷ್ಟೇ ಅವರನ್ನು ಸಂಪರ್ಕಿಸಲು ಸಾಧ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
“ಮೊದಲ ಎರಡು ದಿನ (ಅಕ್ಟೋಬರ್ 5 ಮತ್ತು 6) ಪೊಲೀಸರು ಆತನನ್ನು ಚಿತ್ರಹಿಂಸೆಗೆ ಗುರಿಪಡಿಸಿದರು ಎಂದು ಅವರು ಫೋನ್ ಸಂಭಾಷಣೆಯ ವೇಳೆ ಬಹಿರಂಗಪಡಿಸಿದರು. ಅವರ ಮುಖದ ಮೇಲೆ ಅವರು ಹೊಡೆದರು, ನೆಲದ ಮೇಲೆ ಎಳೆದುಕೊಂಡು ಹೋದರು ಮತ್ತು ನಿದ್ರಿಸುವುದಕ್ಕೆ ಅವಕಾಶ ನೀಡಲಿಲ್ಲ” ಎಂದು ಅವರು ತಿಳಿಸಿದರು.
ಕಾಪ್ಪನ್ ವಿರುದ್ಧ ಪೊಲೀಸರು ಯು.ಎ.ಪಿ.ಎ ಪ್ರಕರಣಗಳನ್ನು ಹೇರಿದ್ದಾರೆ. ದಿಲ್ಲಿ ಗಲಭೆ ಅಥವಾ ಅಕ್ರಮ ಹಣ ಸಾಗಾಟ ಪ್ರಕರಣದಲ್ಲಿ ಭಾಗಿಯಾದ ಆರೋಪಗಳಿಗೆ ಜೋಡಿಸುವ ಮೂಲಕ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಮುಂದುವರಿಸಿದ್ದಾರೆ ಎಂದು ರೈಹಾನ ತಿಳಿಸಿದ್ದಾರೆ.
“ಈ ಎಲ್ಲಾ ಕೊಳಕು ಆಟಗಳ ಹೊರತಾಗಿಯೂ ನಾನು ಸುಪ್ರೀಂ ಕೋರ್ಟ್ ಮತ್ತು ಈ ಮಣ್ಣಿನ ಕಾನೂನಿನ ಮೇಲೆ ನಂಬಿಕೆಯಿಟ್ಟಿದ್ದೇನೆ. ನಮ್ಮ ಪತಿ ಬೇಗನೇ ಬಿಡುಗಡೆಗೊಳ್ಳಲಿದ್ದಾರೆ ಮತ್ತು ನಮ್ಮನ್ನು ಮತ್ತು ನಮ್ಮ ಮೂವರು ಮಕ್ಕಳನ್ನು ಸೇರಲಿದ್ದಾರೆ ಎಂದು ನಾವು ಆಶಿಸುತ್ತೇವೆ” ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಅವರ 90ರ ಹರೆಯದ ಅಜ್ಜಿ ಕೂಡ ಅವರ ಕುರಿತು ಕಳವಳ ಹೊಂದಿದ್ದಾರೆ ಮತ್ತು ಯಾವಾಗಲೂ ಕಣ್ಣೀರು ಹಾಕುತ್ತಿರುತ್ತಾರೆ ಎಂದು ರೈಹಾನ ತಿಳಿಸಿದ್ದಾರೆ.
ರೈಹಾನ ಮಂಗಳವಾರದಂದು ಕೇರಳದ ಕೋಝಿಕ್ಕೋಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅವರು ಕೇರಳ ಸರಕಾರವನ್ನು ಒತ್ತಾಯಿಸಿದ್ದಾರೆ. ತನ್ನ ಪತಿಯನ್ನು ಕಾಪಾಡುವುದಕ್ಕಾಗಿ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ಮೇಲೆ ಒತ್ತಡ ಹೇರುವುದಕ್ಕಾಗಿ ಅವರು ಜನವರಿಯ ಮೊದಲ ವಾರದಲ್ಲಿ ತಿರುವನಂತಪುರದಲ್ಲಿರುವ ರಾಜ್ಯ ಸೆಕ್ರೆಟರಿಯೇಟ್ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.
ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅವರ ಬಿಡುಗಡೆಯನ್ನು ಕೋರಿ ಸುಪ್ರೀಂ ಕೋರ್ಟ್ ಸಂಪರ್ಕಿಸಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಅರ್ನಬ್ ಗೆ ಜಾಮೀನು ನೀಡಿದ್ದ ಅತ್ಯುನ್ನತ ನ್ಯಾಯಾಲಯವು ಹಲವು ವಿಚಾರಣೆಗಳ ಬಳಿಕವೂ ಕಾಪ್ಪನ್ ರಿಗೆ ಜಾಮೀನು ನೀಡಿರಲಿಲ್ಲ.