ಬೆಳ್ತಂಗಡಿಯ ಮೂವರ ಹತ್ಯೆ: SIT ತನಿಖೆ ನಡೆಸುವಂತೆ ಗೃಹ ಸಚಿವರನ್ನು ಭೇಟಿ ಮಾಡಿದ ಮಂಜುನಾಥ್ ಭಂಡಾರಿ

Prasthutha|

ಬೆಂಗಳೂರು: ತುಮಕೂರಿನಲ್ಲಿ ಬೆಳ್ತಂಗಡಿ ತಾಲೂಕಿನ ಮೂವರನ್ನು ಕಾರಿನಲ್ಲಿ ಸುಟ್ಟು ಕೊಂದ ಪ್ರಕರಣವನ್ನು SIT ಮುಖಾಂತರ ತನಿಖೆ ನಡೆಸಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ಮಾಡಿ ಆಗ್ರಹಿಸಿದ್ದಾರೆ.

- Advertisement -

ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ, ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದಿಕ್ ಯಾನೆ ಇಮ್ತಿಯಾಝ್ ಅವರನ್ನು ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿದ ದುಷ್ಕರ್ಮಿಗಳ ತಂಡವೊಂದು ಮೋಸದಿಂದ ತುಮಕೂರಿಗೆ ಕರೆಸಿಕೊಂಡು ಹಣದೋಚಿ ಹತ್ಯೆ ಮಾಡಿದ್ದು, ಬಳಿಕ ತುಮಕೂರು ತಾಲೂಕಿನ ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರು ಸಹಿತ ಮೂವರನ್ನು ಸುಟ್ಟು ಹಾಕಲಾಗಿದೆ.


ಘಟನೆಯ ಮಾಹಿತಿಗಾಗಿ ನಾನು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರಾದ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಹಾಗೂ ಜಿಲ್ಲಾ ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಶುಭಾಶ್ಚಂದ್ರ ಶೆಟ್ಟಿ ಸಹಿತ ಈ ಮೂವರ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ್ದೆವು.
ಸಂತ್ರಸ್ತರ ಕುಟುಂಬಸ್ಥರು ಹೇಳುವಂತೆ, ಈ ಕೊಲೆಯು ಪೂರ್ವ ನಿಯೋಜಿತ ಕೃತ್ಯವಾಗಿದೆ. ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಅಮಾಯಕ ಮೂವರನ್ನು ಮೋಸದಿಂದ ಕರೆದು ಕೊಲೆ ಮಾಡಲಾಗಿದೆ. ಪತ್ರಿಕೆ ವರದಿಗಳ ಮೂಲಕ 6 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದ್ದು, ಕುಟುಂಬಸ್ಥರು ಹೇಳುವ ಪ್ರಕಾರ 60 ಲಕ್ಷದಿಂದ 1 ಕೋಟಿಯವರೆಗೆ ಹಣ ದೋಚಲಾಗಿದ್ದು, ಇಸಾಕ್ ಎಂಬುವರು ಬ್ಯಾಂಕಿನಿಂದ ರೂ.15 ಲಕ್ಷ ಲೋನ್ ತೆಗೆದುಕೊಂಡಿರುತ್ತಾರೆ ಮತ್ತು ಸಿದ್ದೀಕ್ ಕೂಡ ಮನೆ ಮಾರಿ ರೂ. 5ಲಕ್ಷ ಅಡ್ವಾನ್ಸ್ ಪಡೆದಿದ್ದು ಈ ಮೂವರು ಬೇರೆ ಬೇರೆ ಕಡೆಯಿಂದ ಕೈಸಾಲವನ್ನು ತೆಗೆದುಕೊಂಡಿರುತ್ತಾರೆ ಎಂದು ತಿಳಿಸಿರುತ್ತಾರೆ. ಸ್ಥಳಿಯರು ಹೇಳುವ ಪ್ರಕಾರ ಇಂತಹ ಮೋಸದ ಹಲವು ಪ್ರಕರಣಗಳು ನಡೆದಿದ್ದು ಬೆಳಕಿಗೆ ಬಂದಿರುವುದಿಲ್ಲ.

- Advertisement -


ಆದುದರಿಂದ ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಸತ್ಯಾ ಸತ್ಯತೆಯನ್ನು ಪೊಲೀಸ್ ಇಲಾಖೆ ಉನ್ನತ ಮಟ್ಟದ COD ಅಥವಾ SIT ಮುಖಾಂತರ ನಿಷ್ಪಕ್ಷಪಾತ ತನಿಖೆ ನಡೆಸಿ ಇಂತಹ ಮೋಸದ ಜಾಲದ ಹಿಂದಿರುವ ನೈಜ್ಯ ಆರೋಪಿಗಳನ್ನು ಬಂಧಿಸಿ ಇವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಂಜುನಾಥ್ ಭಂಡಾರಿ ಮನವಿ ಮಾಡಿದ್ದಾರೆ.

Join Whatsapp