ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಉರುಸ್‌ ಮಾಡಲು ಅವಕಾಶ ನಿರಾಕರಿಸಿ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ: ಅಫ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು: ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಸಯ್ಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ ಅವರಿಗೆ ಸುಪ್ರೀಂಕೋರ್ಟ್ ಮದ್ಯಂತರ ಆದೇಶದ ಮೂಲಕ ಉರುಸ್‌ ಮತ್ತು ಇನ್ನಿತರ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಿದ್ದರೂ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರ ಕೋರ್ಟಿನ ಆದೇಶಕ್ಕೆ ಕಿಂಚಿತ್ತೂ ಬೆಲೆ ಕೊಡದೆ ಅಲ್ಲಿ ಉರುಸ್‌ ಮಾಡಲು ಅವಕಾಶ ನಿರಾಕರಸಿದೆ. ಈ ಮೂಲಕ ಸರ್ಕಾರ ನ್ಯಾಯಾಂಗ ನಿಂದನೆ ಎಸಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಾಬಾ ಬುಡನ್‌ ಗಿರಿ ವಿಚಾರದಲ್ಲಿ ಕೋಮುವಾದಿ ಬಿಜೆಪಿಯಂತೆ ಕಾಂಗ್ರೆಸ್‌ ಸರ್ಕಾರವೂ ಸಹ ಮುಸ್ಲಿಂ ಸಮುದಾಯವನ್ನು ವಂಚಿಸುತ್ತಲೇ ಬರುತ್ತಿದೆ. ಮುಸ್ಲಿಮರ ಹಿತ ಕಾಯುವ ಬೊಗಳೆ ಆಶ್ವಾಸನೆಗಳನ್ನು ನೀಡುವ ಮೂಲಕ ಮುಸ್ಲಿಮರ ಶೇ.97% ಮತ ಪಡೆದ ಕಾಂಗ್ರೆಸ್‌ ಈ ರೀತಿಯಲ್ಲಿ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುತ್ತಿದೆ ಇದಕ್ಕೆ ಕಾಂಗ್ರೆಸ್‌ ಭಾರೀ ಬೆಲೆ ತೆರಲಿದೆ ಎಂದು ಅಫ್ಸರ್‌ ತಮ್ಮ ಪ್ರಕಟಣೆಯ ಮೂಲಕ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶವನ್ನೂ ಧಿಕ್ಕರಿಸುವ ಮಟ್ಟಕ್ಕೆ ಕಾಂಗ್ರೆಸ್‌ ಸರ್ಕಾರ ಇಳಿಯಲು ಕಾರಣ ಏನು? ಸಂಘಪರಿವಾರಕ್ಕೆ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಸರ್ಕಾರ ಈ ಮಟ್ಟಕ್ಕೆ ಏಕೆ ಹೆದರುತ್ತಿದೆ? ಎಂಬುದಕ್ಕೆ ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಈ ಮಟ್ಟಕ್ಕೆ ಹೆದರುವ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ ಎಂದು ಅಫ್ಸರ್‌ ತಮ್ಮ ಪ್ರಕಟಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Join Whatsapp