ಚಾಮರಾಜನಗರ ದುರಂತ; ಕೋವಿಡ್ ಮರಣ ಪ್ರಮಾಣ ಪತ್ರ ನೀಡದ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ

Prasthutha|

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರ ನೀಡದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ರಾಜ್ಯದಲ್ಲಿ 3.30 ಲಕ್ಷ ಕೋವಿಡ್ ಸಾವುಗಳ ಆಗಿವೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ನಾನು ಕೂಡ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಅದರಲ್ಲೂ ಚಾಮರಾಜನಗರದಲ್ಲೇ ಒಂದೇ ದಿನ 65 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ 36 ಮಂದಿ ಸತ್ತಿದ್ದಾರೆ ಎಂದು ವರದಿ ಬಂದಿವೆ. ಸರ್ಕಾರ ಕೇವಲ 3 ಜನ ಸತ್ತಿದ್ದಾರೆ ಎಂದಿತ್ತು. ನಾನು 36 ಮೃತರ ಕುಟುಂಬಗಳ ಮನೆಗಳಿಗೆ ಭೇಟಿ ಕೊಟ್ಟಿದ್ದೆ. ಇವರಲ್ಲಿ ಯಾರಿಗೂ ಸರ್ಕಾರ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಈ ಮಧ್ಯೆ ಸರ್ಕಾರ 1 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್ ಪರಿಹಾರ ನೀಡಲು ಕಾಲಾವಕಾಶ ನಿಗದಿ ಮಾಡಿದೆ ಎಂದರು.


ಆಂಧ್ರಪ್ರದೇಶ ಸರ್ಕಾರ ಮೃತರಿಗೆ ಪರಿಹಾರ ಘೋಷಿಸಿದೆ. ನಮ್ಮ ರಾಜ್ಯದಲ್ಲೂ ಮೃತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಸೋಂಕಿನಿಂದ ಸತ್ತವರ ಮಾಹಿತಿ ಪಡೆಯಲು ಸರ್ಕಾರ ಡೆತ್ ಆಡಿಟ್ ಮಾಡಿ ಅವರಿಗೆ ಪರಿಹಾರ ನೀಡಬೇಕು. ನಿನ್ನೆ ನಮ್ಮ ಕಾರ್ಯಾಧ್ಯಕ್ಷರು ಬೀದರ್ ಒಂದೇ ಜಿಲ್ಲೆಯಲ್ಲಿ ಸರ್ಕಾರ ಹೇಗೆ ಸುಳ್ಳು ಸಾವಿನ ಲೆಕ್ಕ ನೀಡುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಮನೆಗೂ ಹೋಗಿ ಅವರ ಮಾಹಿತಿ ಪಡೆದು, ಅವರಿಗೆ ಪರಿಹಾರ ಸಿಗುವಂತೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದೇವೆ. ನಾವು ಈ ಸಂಕಷ್ಟದ ಸಮಯದಲ್ಲಿ ಜನರ ಬೆನ್ನಿಗೆ ನಿಲ್ಲುತ್ತೇವೆ’ ಎಂದು ತಿಳಿಸಿದರು.
ಇನ್ನು ವಿಜಯೇಂದ್ರ ಅವರ ಹೆಸರಲ್ಲಿ ಸಚಿವ ಶ್ರೀರಾಮುಲು ಅವರ ಆಪ್ತ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಪಿಎ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಸಚಿವರ ಪಿಎಗಳ ವ್ಯವಹಾರಗಳ ಬಗ್ಗೆ ಮಾತನಾಡುವುದಿಲ್ಲ’ಎಂದು ತಿಳಿಸಿದರು.
ಕಾಂಗ್ರೆಸ್ ಅಪ್ಪ, ಅಮ್ಮ ಇಲ್ಲದ ಮನೆಯಾಗಿದೆ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಯ್ಯೋ ಪಾಪ, ವಿಧಾನಸಭೆ ಚುನಾವಣೆ ಬರಲಿ, ಜನರೇ ಉತ್ತರ ಕೊಡುತ್ತಾರೆ’ಎಂದರು.

- Advertisement -

ಇನ್ನು ಕುಮಾರಸ್ವಾಮಿ ಅವರು 17 ಮಂದಿ ಪಕ್ಷ ತೊರೆದವರ ವಿಚಾರವಾಗಿ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಕುಮಾರಸ್ವಾಮಿ ಅವರ ಹೇಳಿಕೆಯನ್ನು ನೋಡಿದೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಅವರ ಜೀವ ಉಳಿಸುವುದು ಎಂದರೆ ಯಾವ ರೀತಿ ಎಂದು ಗೊತ್ತಾಗಿಲ್ಲ’ಎಂದರು.

Join Whatsapp