ಚಾಮರಾಜನಗರ ದುರ್ಘಟನೆ | ಸಂತ್ರಸ್ತರಿಗೆ 50 ಲಕ್ಷ ರೂ. ಪರಿಹಾರ ಒದಗಿಸುವಂತೆ SDPI ಧರಣಿ

Prasthutha|

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಮ್ಲಜನಕ ಕೊರತೆ ದುರ್ಘಟನೆಯಲ್ಲಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಾಮರಾಜನಗರ ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

- Advertisement -


ಈ ಸಂದರ್ಭ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹ್ಮದ್ , ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಿನಾಂಕ 02/05/2021ರ ಭಾನುವಾರ ಮಧ್ಯ ರಾತ್ರಿ ಆಕ್ಸಿಜನ್ ಪೂರೈಕೆ ಆಗದೆ 37 ಮಂದಿ (ನ್ಯಾಯಮೂರ್ತಿ A.N ವೇಣುಗೋಪಾಲ್ ಗೌಡ ವರದಿ) ಮೃತರಾಗಿ ಈಗಾಗಲೇ ಎರಡು ತಿಂಗಳು ಆಗಿವೆ. ಆದರೆ ಸರ್ಕಾರ ಎಲ್ಲ ಸಂತ್ರಸ್ತರಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ವೇಣುಗೋಪಾಲ್ ಅವರು ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಮ್ಲಜನಕ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು “ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ” ಎಂದು ವರದಿಯಲ್ಲಿ ಒತ್ತಿ ಹೇಳಿದ್ದಾರೆ.
ಇಷ್ಟಾದರೂ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ತೆಗೆದು ಕೊಂಡಿಲ್ಲ. ಇನ್ನೊಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕ ಸದಸ್ಯ ಆಯೋಗದ ಕಚೇರಿ ಸಹ ಮೈಸೂರಿನಲ್ಲಿದೆ. ಸಂತ್ರಸ್ತರು ಮೈಸೂರಿಗೆ ಹೋಗಿ ದೂರು ನೀಡುವುದು ಅಥವಾ ಅಗತ್ಯಕ್ಕೆ ಅನುಸಾರವಾಗಿ ಪದೇ ಪದೇ ಆಯೋಗದ ಕಚೇರಿಗೆ ಹೋಗಿ ಬರಲು ಕಷ್ಟ ಆಗುತ್ತಿದೆ. ಈ ಅವ್ಯವಸ್ಥೆಯೂ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಸಂತ್ರಸ್ತರಿಗೆ ನ್ಯಾಯ ಮರಿಚೀಕೆಯಾಗಿದೆ ಎಂದು ಅಬ್ರಾರ್ ಅಹ್ಮದ್ ಆಕ್ರೋಶ ವ್ಯಕ್ತ ಪಡಿಸಿದರು.


ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಎಸ್.ಸಿ/ಎಸ್.ಟಿ ಸಮುದಾಯದವರು ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ಆಧಾರ ಸ್ತಂಭವಾಗಿದ್ದ ಆ ಕುಟುಂಬಕ್ಕೆ ಮನೆಯ ಯಜಮಾನ ಇಲ್ಲದೇ ಕುಟುಂಬದವರ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಸರ್ಕಾರ ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸಂತ್ರಸ್ತರಿಗೆ 50 ಲಕ್ಷ ರೂ.ಪರಿಹಾರ ಮತ್ತು ದುರ್ಘಟನೆಗೆ ಕಾರಣಕಾರ್ತರಾದ ಎಲ್ಲ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡಲಾಯಿತು.

Join Whatsapp