ಕೊರೊನಾ ನಿಯಂತ್ರಣ ಸರಕಾರದ ವೈಫಲ್ಯ

Prasthutha|

-ರಮೇಶ್ ಎಸ್.ಪೆರ್ಲ

- Advertisement -

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಪರಿಸ್ಥಿತಿ ಸರಕಾರದ ಕೈ ಮೀರಿ ಹೋಗಿದೆ. ದಿನವೊಂದಕ್ಕೆ ಎರಡೂವರೆ ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ ಆಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಗಂಭೀರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಮಹಾನಗರಗಳ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಗಣ್ಯ ವ್ಯಕ್ತಿಗಳೇ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡುವಂತಾಗಿದೆ. ಹಾಸಿಗೆ ಸಿಕ್ಕರೆ ಆಕ್ಸಿಜನ್ ಇಲ್ಲ, ತೀವ್ರ ನಿಗಾ ಘಟಕದಲ್ಲಿ ಐಸಿಯು ವೆಂಟಿಲೇಟರ್ ಇಲ್ಲ. ಈ ಇಲ್ಲಗಳ ನಡುವೆ ಅದೇ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಲಿದೆ. ಮತದೇಹಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಕೊರತೆ ಇದೆ. ಹೆಣ ಸಾಗಿಸುತ್ತಿರುವ ವಾಹನಗಳು ಸ್ಮಶಾನದ ಬಾಗಿಲಲ್ಲಿ ತಮ್ಮ ಸರದಿಗಾಗಿ ಕ್ಯೂ ನಿಂತಿವೆ. ಒಂದೊಂದು ಚಿತೆಯ ಮೇಲೆ ಐದಾರು ಹೆಣಗಳನ್ನು ಒಟ್ಟಿಗೆ ಸುಡ ಬೇಕಾದ ಪರಿಸ್ಥಿತಿ. ಇವೆಲ್ಲದರೆ ನಡುವೆ ಕೋವಿಡ್ ವಾಕ್ಸಿನ್ ಉತ್ಪಾದಿಸಿ ರಪ್ತು ಮಾಡುತ್ತಿದ್ದ ನಮಗೇ ವಾಕ್ಸಿನ್ ಕೊರತೆ. ಇದು ದೇಶದ ಕರುಣಾಜನಕ ಪರಿಸ್ಥಿತಿ.

ದೇಶದ ನಾಸಿಕ್, ಥಾಣೆ, ನಾಗಪುರ, ದೆಹಲಿ, ಮುಂಬಯಿ, ಅಹ್ಮದಾಬಾದ್, ಬೆಂಗಳೂರು ನಗರ, ಪುಣೆ, ಲಕ್ನೋ, ಸೂರತ್, ಕೊಲ್ಕತ್ತಾ, ಜೈಪುರ್, ಇಂಧೋರ್ ಮುಂತಾದ ಮಹಾನಗರಗಳ ಪರಿಸ್ಥಿತಿ ತೀರಾ ಬಿಗಡಾಯಿಸಿದೆ. ಬಹುತೇಕ ಮಹಾನಗರಗಳು ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕೇಂದ್ರಗಳಾಗಿವೆ. ಇಂತಹ ಆರ್ಥಿಕ ಚಟುವಟಿಕೆಯ ಕೇಂದ್ರಗಳು ಸಾಂಕ್ರಾಮಿಕ ಸೋಂಕಿನಿಂದ ನಲುಗಿದರೆ ಇಡೀ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಖಚಿತ. ಈಗಾಗಲೇ ಕಳೆದ ವರ್ಷದ ಅವೈಜ್ಞಾನಿಕ ಲಾಕ್‌ ಡೌನ್ ಘೋಷಣೆಯಿಂದ ಕೋಟ್ಯಂತರ ಮಂದಿ ಸಂಕಷ್ಟಕ್ಕೀಡಾದರು. ವಲಸೆ ಕಾರ್ಮಿಕರು ಪಡಬಾರದ ಕಷ್ಟ ಎದುರಿಸಬೇಕಾಯಿತು. ಸಣ್ಣ ವ್ಯಾಪಾರಿಗಳು, ಕಿರು ಉದ್ಯಮಿಗಳು, ಸ್ವಯಂ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಆದಾಯವಿಲ್ಲದೆ ದುಃಖಿಸುವ ಪರಿಸ್ಥಿತಿ. ಆದರೆ, ಈ ನಾಡನ್ನು ಆಳುವ ಸ್ವಘೋಷಿತ ಮಹಾನ್ ನಾಯಕರುಗಳಿಗೆ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇರಲಿಲ್ಲ. ನೋಟ್ ಬಂದಿ ಅನಂತರ ನೆಲಕಚ್ಚಿದ ಆರ್ಥಿಕತೆ ಈ ಅವೈಜ್ಞಾನಿಕ ಲಾಕ್‌ ಡೌನ್ ಪರಿಣಾಮ ಮತ್ತಷ್ಟು ಕೆಟ್ಟು ಹೋಗಿದೆ.

- Advertisement -

ಒಂದೆಡೆ ಆರ್ಥಿಕ ದುಸ್ಥಿತಿ, ನಿರುದ್ಯೋಗ. ಮತ್ತೊಂದೆಡೆ ಕೊರೊನಾಸೋಂಕು ಮಹಾನಗರಗಳ ಜನರನ್ನು ಆಪೋಶನ ನಡೆಸುತ್ತಿದ್ದರೆ ರಾಜಕೀಯ ಮುಖಂಡರು ಚುನಾವಣಾ ಪ್ರಚಾರದ ಥ್ರಿಲ್ ಅನುಭವಿಸುತ್ತಿದ್ದಾರೆ. ಜನಸಮೂಹ ಸೇರಿಸಬೇಡಿ ಕೊರೊನಾ ಸೋಂಕು ಹರಡುತ್ತದೆ ಎಂದು ಭಾಷಣ ಮಾಡಿದವರು ಇದು ಚುನಾವಣಾ ಸಮಾವೇಶಗಳಲ್ಲಿ, ರೋಡ್ ಶೋಗಳಲ್ಲಿ ಭಾಗವಹಿಸಿ ‘‘ಓಹೋ ನೋಡಿ ತನ್ನ ಸಮಾವೇಶಕ್ಕೆ ಎಷ್ಟೊಂದು ಜನಸಾಗರ ಸೇರಿದೆ’’ ಎಂದು ಎದೆಯುಬ್ಬಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಕ್ಕೆ, ರಾಜಕಾರಣಿಗಳಿಗೆ ಚುನಾವಣಾ ಪ್ರಚಾರ, ಭಾಷಣ, ಚುನಾವಣೆ ಗೆಲ್ಲುವುದು, ಅಧಿಕಾರ ಹಿಡಿಯುವುದು ಆ ಮೂಲಕ ತಮ್ಮ ಪಕ್ಷಕ್ಕೆ ಬಂಡವಾಳ ಹೂಡಿದ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡುವುದು ಆದ್ಯತೆ ಆದಾಗ ದೇಶದ ಹಿತ ಪ್ರಾಮುಖ್ಯತೆ ಕಳಕೊಳ್ಳುತ್ತದೆ. ಅಧಿಕಾರದ ಹಿಂದೆ ಬಿದ್ದಿರುವ ರಾಜಕಾರಣಿ ಜನಹಿತವನ್ನು ಮರೆಯುತ್ತಾನೆ. ಇಂದು ದೇಶದಲ್ಲಿ ನಡೆಯುತ್ತಿರುವುದು ಇದೇ.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಸಮಾವೇಶಗಳು ರಾಜಕೀಯ ಪಕ್ಷಗಳ ಅಧಿಕಾರ ಲಾಲಸೆಯನ್ನು ಸ್ಪಷ್ಟಪಡಿಸುತ್ತದೆ. ಪ್ರಧಾನಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ಈಗಾಗಲೇ ತಾನೊಬ್ಬ ಚುನಾವಣಾ ಭಾಷಣಗಾರ ಎಂಬುದನ್ನು ತೋರಿಸಿ ಆಗಿತ್ತು. ಆದರೆ, ಈ ಬಾರಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಕೊರೊನಾ ಅಟ್ಟಹಾಸದ ನಡುವೆಯೂ ಕೂಡ ಬೃಹತ್ ಪ್ರಮಾಣದಲ್ಲಿ ಹಲವಾರು ಚುನಾವಣಾ ಸಮಾವೇಶಗಳನ್ನು ಆಯೋಜಿಸಿರುವುದನ್ನು ಕಂಡಾಗ ಇವರ ಇಬ್ಬಂದಿತನ-ಡಬ್ಬಲ್ ಸ್ಟ್ಯಾಂಡರ್ಡ್ ಮತ್ತೊಮ್ಮೆ ಬಯಲಾಗಿದೆ. ವಿಶ್ವಕ್ಕೆಲ್ಲ ಕೋವಿಡ್ ಲಸಿಕೆ ಹಂಚಿ, ದೇಶದ ಜನತೆಗೆ ಕೊರೊನಾ ಮುಂಜಾಗೃತಾ ಕ್ರಮಗಳನ್ನು ಜನರಿಗೆ ಹೇಳಿ ತಾನೇ ಒಂದಲ್ಲ ಹಲವು ಬಾರಿ ಅದೇ ಪ್ರೊಟೊಕಾಲ್ ಮುರಿಯುವುದೆಂದರೆ ಇದು ಇದುವರೆಗೆ ಯಾರೂ ನಡೆಸದ ಪ್ರಮಾದ ಎನ್ನಲೇ ಬೇಕಾಗುತ್ತದೆ.

ಕಳೆದ ವರ್ಷ ಕೂಡ ಕೊರೊನಾ ಆರಂಭದಲ್ಲಿ ನಮಸ್ತೆ ಟ್ರಂಪ್‌ ನಂತಹ ಕಾರ್ಯಕ್ರಮಗಳನ್ನು ನಡೆಸಿ ಹೊಣೆಗೇಡಿತನವನ್ನು ಸರಕಾರ ಪ್ರದರ್ಶನ ಮಾಡಿತ್ತು. ಸೋಂಕಿನ ಪ್ರಮಾಣ ಹೆಚ್ಚಾದಾಗ ಮರ್ಕಝ್ ಪ್ರತಿನಿಧಿಗಳ ಮೇಲೆ ಆರೋಪ ಹೊರಿಸಿ ರಾಜಕೀಯ ಮಾಡಲಾಯಿತು. ಅನಂತರ, ಸೋಂಕು ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದ ಸರಕಾರ ದಿಢೀರ್ ಲಾಕ್‌ ಡೌನ್ ಮಾಡಿ ಜನರ ಜೀವನದೊಂದಿಗೆ ಚೆಲ್ಲಾಟ ನಡೆಸಿತ್ತು. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಬೇಕಾದ ಆರೋಗ್ಯ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿಲ್ಲ. ಕೊರೊನಾವನ್ನು ನೆಪ ಮಾಡಿಕೊಂಡ ಸರಕಾರ ಭ್ರಷ್ಟಾಚಾರ ನಡೆಸಿತ್ತು. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆಯಿತು. ಸ್ಥಳೀಯವಾಗಿ ಬಡವರು, ವಲಸೆ ಕಾರ್ಮಿಕರ ಹೆಸರಿಲ್ಲಿ ಅಕ್ಕಿ ಸಹಿತ ದಿನಸಿಯನ್ನು ಸ್ಥಳೀಯ ರಾಜಕಾರಣಿಗಳು ನುಂಗಿದರು.

ಒಂದು ವರ್ಷದ ಅನಂತರ ಅಪಾಯಕಾರಿ ಸ್ವರೂಪದಲ್ಲಿ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಮಾರ್ಚ್ ತಿಂಗಳ ಅಂತ್ಯ ಮತ್ತು ಏಪ್ರಿಲ್ ತಿಂಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದಿಢೀರನೆ ಏರಿಕೆ ಆಗಿದೆ. ದುರಂತಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರ ಕಲಿತದ್ದು ಏನು ಅಂದರೆ ಏನೂ ಇಲ್ಲ. ಮೊದಲಿಗೆ ಕೊರೊನಾ ಸೋಂಕಿನ ಬಗ್ಗೆ ಸರಿಯಾದ ಜನಜಾಗೃತಿ ರೂಪಿಸಲು ಕೇರಳ ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಆಗಲಿಲ್ಲ. ಇಂತಹದೊಂದು ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇಕಾದ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಯಿಂದ ತೊಡಗಿ ಹಾಸಿಗೆ, ವೆಂಟಿಲೇಟರ್, ಐಸಿಯು, ಆಂಬ್ಯುಲೆನ್ಸ್, ಪಿಪಿಇ ಕಿಟ್, ಅರೆ ವೈದ್ಯಕೀಯ ಸಿಬ್ಬಂದಿ ಇತ್ಯಾದಿ ಎಲ್ಲದಕ್ಕೂ ಕೊರತೆ. ಕೊನೆಗೆ ಸತ್ತವರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಸೌಕರ್ಯವನ್ನಾದರು ನಿರ್ಮಿಸಲು ಸರಕಾರಕ್ಕೆ ಸಾಧ್ಯ ಆಗಲಿಲ್ಲ. ಅಧಿಕಾರದ ಲಾಲಸೆಯಲ್ಲಿ ಬಿದ್ದಿರುವ ಆಡಳಿತ ಪಕ್ಷಕ್ಕೆ ಆಡಳಿತ ನಡೆಸುವ ಹೊಣೆಗಾರಿಕೆಯೂ ಇಲ್ಲ, ಅದಕ್ಕೆ ಬೇಕಾಗಿರುವ ಅರ್ಹತೆಯೂ ಇದ್ದಂತಿಲ್ಲ. ಚುನಾವಣಾ ಪ್ರಚಾರ, ರಾಜಕೀಯ ತಂತ್ರಗಾರಿಕೆ, ಪ್ರೊಪಗಾಂಡ, ಅಪಪ್ರಚಾರ, ಚುನಾವಣೆ ಗೆಲ್ಲುವ ಮಸಲತ್ತು, ಶಾಸಕರ ಖರೀದಿ, ಸಂಪನ್ಮೂಲ ಸಂಗ್ರಹ ಇತ್ಯಾದಿಗಳಲ್ಲಿ ಇರುವ ಆಸಕ್ತಿ, ಅನುಭವ ಆಡಳಿತ ನಡೆಸುವುದರಲ್ಲಿ ಇಲ್ಲದಿರುವುದು ಈ ದೇಶದ ಮತ್ತೊಂದು ದುರಂತ. ಜನಪರ ಕಾಳಜಿಯೂ ಇಲ್ಲ.

ಕಳೆದ ವರುಷ ಕೊರೊನಾ ಆರಂಭವಾಗುತ್ತಿದ್ದಂತೆ ಶುರುವಾಗಿದ್ದೆ ಪಿಪಿಇ ಕಿಟ್, ಆಕ್ಸಿಜನ್, ವೆಂಟಿಲೇಟರ್ ಕೊರತೆಯ ಕತೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಮ್ಮಲ್ಲಿ ಕೊರೊನಾ ಪರಿಸ್ಥಿತಿ ಕೆಡಲಾರಂಭಿಸಿತ್ತು. ಈ ವರ್ಷವೂ ಅಷ್ಟೇ. ಮೊದಲ ಬಾರಿ ಕೊರೊನಾ ತೀವ್ರಗೊಂಡಾಗ ಅದು ಕೊಡಬೇಕಾದ ಎಲ್ಲ ಎಚ್ಚರಿಕೆಗಳನ್ನೂ ಕೊಟ್ಟೇ ಹೋಗಿತ್ತು. ಯಾವುದನ್ನೂ ಬಾಕಿ ಇಟ್ಟಿಲ್ಲ. ಆದರೆ, ನಮ್ಮ ಸರಕಾರ ನಡೆಸುವವರು ಮಾತ್ರ ಯಾವುದನ್ನು ಕಲಿಯಲು ಸಿದ್ಧರಾಗಲಿಲ್ಲ.

ನೇರವಾಗಿ ಶ್ವಾಸಕೋಶವನ್ನು ಬಾಧಿಸುವ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪೂರ್ಣ ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುತ್ತದೆ ಎಂದು ಪರಿಣಿತರು ಕೊರೊನಾ ಶುರುವಾದಾಗ ಆರಂಭದಲ್ಲೇ ಹೇಳಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ನಮ್ಮಲ್ಲಿ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಸರಬರಾಜು ಆಗುತ್ತಿಲ್ಲ ಎಂಬುದು ಕಂಡುಬಂತು. ಅವೈಜ್ಞಾನಿಕ ಲಾಕ್‌ ಡೌನ್ ಪರಿಣಾಮ ಆಕ್ಸಿಜನ್ ಉತ್ಪಾದನಾ ಘಟಕಗಳು ಬಂದ್ ಆಗಿದ್ದವು. ಲಾಕ್ ನಿರ್ಬಂಧ ಮತ್ತು ಪೊಲೀಸರ ಲಾಠಿಗೆ ಹೆದರಿ ಕಾರ್ಮಿಕರು ಆಕ್ಸಿಜನ್ ಉತ್ಪಾದನಾ ಘಟಕಗಳ ಕೆಲಸಕ್ಕೆ ಹಾಜರಾಗಲಿಲ್ಲ. ಆದರೆ, ಮೆಡಿಕಲ್ ಏಮರ್ಜೆನ್ಸಿ ಹೆಸರಲ್ಲಿ ಇಂತಹ ಘಟಕದ ಮಾಲಕರ ಮೇಲೆ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಒತ್ತಡ ಬರತೊಡಗಿತ್ತು.

 Pressure Swing Adsorption (PSA) ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಹೊಸ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಲ್ಲಿ ಸರಕಾರ ವಹಿಸಿದ ದಿವ್ಯ ನಿರ್ಲಕ್ಷದ ಫಲಶ್ರುತಿಯೇ ಇಂದು ಆಕ್ಸಿಜನ್ ಕೊರತೆ ಹಾಗೂ ಜನರ ಸಾವು-ಆಕ್ಸಿಜನ್ ಕೊರತೆಯನ್ನು ನೀಗಿಸಲು ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಟೆಂಡರ್ ಕರೆಯಲು ಸರಕಾರ ಸುದೀರ್ಘ ಎಂಟು ತಿಂಗಳನ್ನು ತೆಗೆದುಕೊಂಡಿತು. ದೇಶದ ನೂರೈವತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು.

ಆಕ್ಸಿಜನ್ ಘಟಕಗಳಿಗೆ ಪಿಎಮ್ ಕೇರ್ಸ್ ನಿಧಿಯಿಂದ 202 ಕೋಟಿ ರೂಪಾಯಿ ನೀಡಲಾಗಿತ್ತು. ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ಇತ್ತೀಚಿಗಿನ ವರೆಗೆ 162 ಆಕ್ಸಿಜನ್ ಘಟಕಗಳಲ್ಲಿ ಕೇವಲ 33ನ್ನು ಮಾತ್ರ ಸ್ಥಾಪಿಸಲಾಗಿದೆ. ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕಗಳು ಹತ್ತಕ್ಕಿಂತಲೂ ಕಡಿಮೆ. ಉಳಿದ 59 ಘಟಕಗಳನ್ನು ಎಪ್ರಿಲ್ ಅಂತ್ಯಕ್ಕೆ, 80 ಘಟಕಗಳು ಮೇ ಅಂತ್ಯದ ವೇಳೆಗೆ ರೆಡಿ ಆಗಬಹುದು. ಇದು ಸರಕಾರದ ಕಾರ್ಯವೈಖರಿ.

ಈ ಪಿಎಸ್‌ ಎ ಟೆಕ್ನಾಲಜಿಯಲ್ಲಿ ಆಕ್ಸಿಜನನ್ನು ಉತ್ಪಾದಿಸಿದರೆ ಆಸ್ಪತ್ರೆಗೆ ಬೇಕಾಗುವ ಆಕ್ಸಿಜನನ್ನು ಪೈಪ್ ಲೈನ್ ಮೂಲಕ ಆಸ್ಪತ್ರೆಯ ಪ್ರತಿ ಕೊಠಡಿಗೂ ಪೂರೈಸಬಹುದು. ಇದರಿಂದಾಗಿ ಆಸ್ಪತ್ರೆಗಳು ಆಕ್ಸಿಜನ್ ಸಿಲಿಂಡರ್ ಪೂರೈಕೆಗಾಗಿ ಬೇರೆಯವರನ್ನು ಅವಲಂಬಿಸಬೇಕಾಗಿಲ್ಲ. ಮಂಗಳೂರಿನ ಸರಕಾರಿ ವೆನ್‌ ಲಾಕ್ ಆಸ್ಪತ್ರೆ ಆಕ್ಸಿಜನ್ ಘಟಕ ಹೊಂದಿದೆ.

ದೇಶದ ಎಲ್ಲೆಡೆ 150ಕ್ಕೂ ಹೆಚ್ಚು ಘಟಕಗಳು ಆರಂಭವಾಗಿ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದರೆ ತಿಂಗಳೊಂದಕ್ಕೆ 4,500 ಮೆಟ್ರಿಕ್ ಟನ್ ಆಕ್ಸಿಜನ್ ನೇರವಾಗಿ ರೋಗಿಗಳ ಕೊಠಡಿಗೆ ಸಪ್ಲೈ ಆಗುತಿತ್ತು. ಇಂದಿನ ಪರಿಸ್ಥಿತಿಯಲ್ಲಿ ಕೆಲವು ಸಾವಿರ ಜನರ ಪ್ರಾಣ ಉಳಿಯುತಿತ್ತು. ಕೇವಲ ಇನ್ನೂರು ಕೋಟಿ ಖರ್ಚಿನಲ್ಲಿ ಆಗುವ ಕೆಲಸ ಸರಕಾರದ ಅಸಾಮರ್ಥ್ಯ ಮತ್ತು ಅಸಡ್ಡೆಯಿಂದ ಅನುಷ್ಠಾನ ಆಗಿಲ್ಲ.

ಮಾಸ್ಕ್ ಮತ್ತು ಲಾಕ್‌ ಡೌನ್ ಎರಡರಿಂದಲೇ ಕೊರೊನಾನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸರಕಾರ ತಿಳಿದುಕೊಳ್ಳಬೇಕು. ವಿಶ್ವದ ಯಾವುದೇ ಕಡೆ ಮಾಸ್ಕ್ ಧರಿಸದ ತಪ್ಪಿಗಾಗಿ ದಂಡ ಹೇರುವ ಕ್ರಮ ಇರದು. ಸರಕಾರದ ಈ ಕ್ರಮಗಳಿಂದ ಜನರು ಮಾಸ್ಕ್ ಧರಿಸಲು ಮಾತ್ರ ಆದ್ಯತೆ ನೀಡುತ್ತಿದ್ದರೆ ಹೊರತು ಸೋಂಕು ಹರಡದಂತೆ ತಡೆಯಬೇಕಾದ ಇನ್ನಿತರ ಕಾರ್ಯಕ್ಕೆ ಮನ್ನಣೆ ನೀಡುತ್ತಿಲ್ಲ. ಜನಸಂದಣಿ ಸೇರದಿರುವುದು, ಜ್ವರ ಬಂದಾಗ ಹೊರಗಡೆ ಹೋಗದಿರುವುದು, ಅನಗತ್ಯ ಓಡಾಟ, ಸ್ಯಾನಿಟೈಸ್ ಮಾಡುವುದು, ಕೈ ತೊಳೆಯುವುದು, ಸ್ವಚ್ಛತೆ ಕಾಪಾಡುವುದು, ದೈಹಿಕ ಅಂತರ ಕಾಪಾಡುವುದು, ತುಂಬಾ ಜನಸಂದಣಿ ಇದ್ದಲ್ಲಿಗೆ ಹೋಗದಿರುವುದು ಇತ್ಯಾದಿ ವಿಚಾರಗಳಿಗ ಜನರು ಗಮನ ನೀಡುತ್ತಿಲ್ಲ. ಮತ್ತೊಂದು ರಾಜಕಾರಣಿಗಳು ಖುಲ್ಲಂ ಖುಲ್ಲ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕೂಡ ಸಾರ್ವಜನಿಕರಲ್ಲಿ ತಪ್ಪುಅಭಿಪ್ರಾಯ ಬೆಳೆಯಲು ಕಾರಣವಾಗಿದೆ.

ಐಟಿ ಸೆಲ್, ಫೇಕ್ ನ್ಯೂಸ್, ಪಂಚಿಂಗ್ ಡೈಲಾಗ್, ಪೊಳ್ಳು ಘೋಷಣೆ ಮೂಲಕ ಸರಕಾರ ನಡೆಸುತ್ತಿರುವ ಆಡಳಿತ ಪಕ್ಷಕ್ಕೆ ತಮ್ಮ ವೈಫಲ್ಯ ಮರೆಮಾಚಲು ಹಾಕಲು ನೂರಾರು ದಾರಿಗಳಿವೆ. ಚುನಾವಣೆ ಗೆಲ್ಲುವ ಗೀಳು ಹೊಂದಿರುವ ರಾಜಕೀಯ ಪಕ್ಷ ಜನರ ಪ್ರಾಣಕ್ಕೆ ಯಾವ ಬೆಲೆಯನ್ನು ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿದ್ದರೂ ಈಗಲೂ ಭಜನೆ ಮಾತ್ರ ನಿಂತಿಲ್ಲ.

ಕಳೆದ ವರ್ಷ ಕೊರೊನಾ ಅವಾಂತರ ಅನಂತರ ಕೆಲವು ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಪ್ಯಾಕೇಜ್ ಎಲ್ಲಿ ಕರಗಿ ಹೋಗಿದೆ ಎಂಬುದರ ಮಾಹಿತಿ ಇಲ್ಲ. ಪಿಎಂ ಕೇರ್ಸ್ ನಿಧಿಗೆ ಎಷ್ಟು ದೇಣಿಗೆ ಬಂದಿದೆ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಕೂಡ ಸುದ್ದಿ ಇಲ್ಲ. ಕೊರೊನಾ ವಾರಿಯರ್‌ ಗಳಿಗೆ 50 ಲಕ್ಷ ರೂ. ವಿಮಾ ಭದ್ರತೆ ಘೋಷಿಸಲಾಗಿತ್ತು. ಐವರಲ್ಲಿ ಒಬ್ಬರ ಕುಟುಂಬಕ್ಕೆ ಮಾತ್ರ ವಿಮೆ ಹಣ ಬಿಡುಗಡೆಯಾಗಿದೆ. ಈ ವರ್ಷದ ಮಾರ್ಚ್ 24ರ ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ಪ್ರಕಾರ, ಕೊರೊನಾ ವಾರಿಯರ್‌ ಗಳಿಗೆ ನೀಡಲಾಗುತ್ತಿದ್ದ 50 ಲಕ್ಷ ರೂ. ವಿಮಾ ಭದ್ರತೆಯನ್ನು ಮೊಟಕು ಮಾಡಲಾಗಿದೆ.

ಜನರ ಜೀವ ಉಳಿಸಲು ಹೆಣಗಾ ಡುತ್ತಿರುವ ವೈದ್ಯರು, ತಳಮಟ್ಟದ ಆಶಾ ಕಾರ್ಯಕರ್ತೆಯರು, ಆಂಬ್ಯುಲೆನ್ಸ್ ಚಾಲಕರು, ಆರೋಗ್ಯ ಸಿಬ್ಬಂದಿಗಳಂತಹ ಬಡಪಾಯಿಗಳಿಗೆ ಇನ್ನು ವಿಮೆ ಭದ್ರತೆ ಇಲ್ಲ. ಕಳೆದ ವರ್ಷದಿಂದ ಈಚೆಗೆ ಆರೋಗ್ಯ ಸೇವೆಯ ಮೂಲ ಸೌಕರ್ಯ ಒಂದಿಂಚು ಸುಧಾರಣೆ ಆಗಿಲ್ಲ. ಜನ ಜಾಗೃತಿ ಕಾರ್ಯಕ್ರಮಗಳು ಕೂಡ ಸರಕಾರ ನಡೆಸುತ್ತಿಲ್ಲ. ಇಂತಹ ಸಾಂಕ್ರಾಮಿಕ ಸೋಂಕುಗಳನ್ನು ನಿಯಂತ್ರಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಪರಿಣಾಮಕಾರಿ ಪ್ರತಿರೋಧ ಆಗುತ್ತದೆ. ಕೇಂದ್ರ ಸರಕಾರ ನಿರಂತರ ತಪ್ಪು ಆರ್ಥಿಕ ನೀತಿಗಳಿಂದ ಪ್ರಜೆಗಳು ಸಂಪೂರ್ಣ ಕಂಗಾಲಾಗಿದ್ದಾರೆ. ಕೊರೊನಾವನ್ನು ಜಯಿಸಲು ಅವರಿಗೆ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಚೈತನ್ಯವನ್ನು ಕೂಡ ನೀಡಬೇಕಾಗಿದೆ. ವಿಧಾನಸಭಾ ಚುನಾವಣೆಗಳ ನಂತರ ಎಲ್ಲೆಲ್ಲಿ ಆಪರೇಷನ್ ಕಮಲ ಮಾಡ ಬಹುದು, ಸರಕಾರ ರಚಿಸಬಹುದು ಎಂಬ ಗುಂಗಿನಲ್ಲಿರುವ ಆಡಳಿತ ಪಕ್ಷಕ್ಕೆ ಜನರ ಆರ್ತನಾದ ಕೇಳಿಸುತ್ತಲೇ ಇಲ್ಲ.

Join Whatsapp