ಕೈ ತಪ್ಪಿದ ಸಚಿವ ಸ್ಥಾನ; ಕಣ್ಣೀರು ಹಾಕಿದ ರೇಣುಕಾಚಾರ್ಯ

Prasthutha|

- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಇದರಲ್ಲಿ ಶಾಸಕ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಹೀಗಾಗಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ.

ಇನ್ನು ಸಚಿವ ಸ್ಥಾನ ಕೈತಪ್ಪಿರುವ ದುಃಖವನ್ನು ಅದುಮಿಕೊಂಡಿರುವ ರೇಣುಕಾಚಾರ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಡಿಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಲಾಬಿ ಮಾಡಿಲ್ಲ, ಲಾಬಿ ಮಾಡಿದ್ರೆ ನಾನೂ ಇಂದು ಮಂತ್ರಿಯಾಗುತ್ತಿದ್ದೆ. ಯಾರು ಸಮರ್ಥರಿದ್ದಾರೆ ಅವರಿಗೆ ಕೊಟ್ಟಿರಬಹುದು. ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರಿಗೆ ಒಳ್ಳೆಯದಾಗಲಿ. ಅವರಿಗೆ ನನ್ನ ಕಡೆಯಿಂದ ಶುಭವನ್ನು ಕೋರುತ್ತೇನೆ ಎನ್ನುತ್ತಲೇ ಭಾವುಕರಾಗಿದ್ದಾರೆ.

- Advertisement -

ಈ ಹಿಂದೆ ಯಡಿಯೂರಪ್ಪರನ್ನು ಭೇಟಿಯಾದ್ರಿ. ಒಂದು ಹಂತದಲ್ಲಿ ನಾಯಕತ್ವ ಬದಲಾವಣೆಯಾಗಬಾರದು ಎಂದು ಪಟ್ಟು ಹಿಡಿದು ಸಹಿ ಸಂಗ್ರಹ ಕೂಡ ಮಾಡಿದ್ರಿ. ಆದರೆ ಇಂದು ಸಚಿವ ಸ್ಥಾನ ಸಿಕ್ಕಿಲ್ಲ. ಇದು ಈಗಾಗಲೇ ಮುಗಿದ ಅಧ್ಯಾಯ. ಹಳೆಯ ಕಥೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದು ಬೇಡ. ಕಥೆ ಕಥೆಯಾಗಿಯೇ ಉಳಿಯಲಿ. ನಾನು ಈವಾಗ ಏನು ಮಾತಾಡಿದ್ರೂ, ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಅಸಮಾಧಾನದಿಂದ ಮಾತಾಡಿದ್ದಾರೆ ಎಂದು ಆಗುತ್ತದೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಇಚ್ಛೆ ಪಡಲ್ಲ ಎಂದು ಹೇಳಿದ್ದಾರೆ.

ಕಳೆದ 8 ದಿನಗಳ ಹಿಂದೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ. ಇವತ್ತು 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಮಾಡಿದ್ದಾರೆ. ಬಹುಶಃ ಅವರೆಲ್ಲ ಸಮರ್ಥರಿದ್ದಾರೆ. ಹಾಗಾಗಿ ಕೊಟ್ಟಿರಬಹುದು. ಅಧಿಕಾರಕ್ಕೋಸ್ಕರ ಅಂಟಿಕೊಳ್ಳುವ ವ್ಯಕ್ತಿ ನಾನಲ್ಲ. ನಾನು ಕೆಲಸ ಮಾಡಿದ್ದೀನಿ. ಅಧಿಕಾರ ನನ್ನ ಹಿಂದೆ ಬರಬೇಕು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಲಾಬಿ ಮಾಡಿಲ್ಲ. ಬೆಂಗಳೂರು, ಡೆಲ್ಲಿಯಲ್ಲಿ ಕುಳಿತುಕೊಂಡು ಲಾಬಿ ಮಾಡಬಹುದಿತ್ತು. ಆದರೆ ನಾನು ಕ್ಷೇತ್ರದ ಜನರ ಮಧ್ಯೆ ಇದ್ದೆ. ಕೆರೆ ಕಟ್ಟೆ ಒಡೆದು ಹೋಗಿ ಬೆಳೆ ನಾಶ ಆಗಿತ್ತು. ಅಲ್ಲಿ ಹೋಗಿ ಜಂಟಿ ಸಮೀಕ್ಷೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಬಂದಿದ್ದೇನೆ ಎಂದು ಹೇಳಿದ್ದಾರೆ. ‌

Join Whatsapp