‘ಕಾರ್ಮಿಕರಿಗೆ ಮತ್ತು ಸಣ್ಣ ವ್ಯಾಪಾರಗಳಿಗೆ ಆರ್ಥಿಕ ನೆರವು ನೀಡಿ’ : ವೆಲ್ಫೇರ್ ಪಾರ್ಟಿ ಆಗ್ರಹ

Prasthutha|

ಬೆಂಗಳೂರು: ಕೋವಿಡ್‌ ತಡೆಗಟ್ಟಲು ರಾಜ್ಯ ಸರ್ಕಾರ 14 ದಿನಗಳ ಲಾಕ್‌ಡೌನ್‌ ಅನ್ನು ರಾಜ್ಯದಾದ್ಯಂತ ಜಾರಿಗೊಳಿಸಿದ್ದು, ದುಡಿಯುವ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷರು ಶ್ರೀಕಾಂತ್ ಸಾಲಿಯಾನ್ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಕೋವಿಡ್‌ಗೆ ಸಂಬಂಧಿಸಿದಂತೆ ತಜ್ಞರ ಸಲಹೆಗಳನ್ನು ತಿರಸ್ಕರಿಸಿ, ರಾಜ್ಯದ ಹಿತವನ್ನು ಮರೆತು, ಚುನಾವಣೆಗಳಲ್ಲಿ ಇಡೀ ರಾಜ್ಯ ಸರ್ಕಾರ ಮುಳುಗಿದ ಪರಿಣಾಮ ಇಂದು ರಾಜ್ಯದ ಜನರಿಗೆ ಮುಳುವಾಗಿದೆ. ಈ ಸಂಕಷ್ಟ ಪರಿಸ್ಥಿತಿಗೆ ರಾಜ್ಯ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಎಲ್ಲಾ ಕಾರ್ಮಿಕರಿಗೆ ಕೋವಿಡ್ ಎರಡನೇ ಅಲೆಯ ಪರಿಹಾರವೆಂದು ವಾರಕ್ಕೆ ತಲಾ ₹2000 ದಂತೆ ತಿಂಗಳಿಗೆ ₹8000 ಪರಿಹಾರ ಮುಂದಿನ 3 ತಿಂಗಳವರೆಗೆ ನೀಡಬೇಕು. ಕಳೆದ ವರ್ಷ ಘೋಷಿಸಲಾದ ಕೋವಿಡ್ ಪರಿಹಾರ ₹5 ಸಾವಿರ ಬಾಕಿ ಇರುವ 1.20 ಲಕ್ಷ ಕಾರ್ಮಿಕರಿಗೆ ಕೂಡಲೇ ವರ್ಗಾವಣೆ ಮಾಡಬೇಕು. ಕೋವಿಡ್ ಸಮಯದಲ್ಲಿ ಶೈಕ್ಷಣಿಕ ಮತ್ತು ಪಿಂಚಣಿ, ಮದುವೆ, ವೈದ್ಯಕೀಯ ಮೊದಲಾದ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಮುಂದಿನ 3 ತಿಂಗಳವರೆಗೂ ಅವಧಿ ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

- Advertisement -

‘ಎರಡನೇ ಕೋವಿಡ್ ಅಲೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿರುವ ಅಂತರರಾಜ್ಯ ಮತ್ತು ಅಂತರ್‌ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಊಟ, ವಸತಿ ಮತ್ತು ಅವರು ತಮ್ಮ ಊರುಗಳಿಗೆ ತೆರಳಲು ಬಯಸಿದರೆ ಉಚಿತ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಬಡವರು ಮತ್ತು ಕಾರ್ಮಿಕರಿಗೆ ಯಾವುದೇ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡದೆ, ಲಾಕ್‌ಡೌನ್‌ ಹೇರಿದ್ದು ಸರಿಯಲ್ಲ. ಆಸ್ಪತ್ರೆಗಳಲ್ಲಿ ಆಮ್ಲಜನಕ, ಹಾಸಿಗೆ ಮತ್ತು ಸಮರ್ಪಕ ಚಿಕಿತ್ಸೆ ಸಿಗದೆ ಬಡ ರೋಗಿಗಳು ಪರದಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp