ಕತಾರ್ ಕಾರ್ಮಿಕ ನೀತಿಯಲ್ಲಿ ಮಹತ್ವದ ಬದಲಾವಣೆ | ಲಕ್ಷಾಂತರ ಭಾರತೀಯ ವಲಸಿಗ ಕಾರ್ಮಿಕರಿಗೆ ಲಾಭ

Prasthutha|

ನವದೆಹಲಿ : 2022ರ ಫಿಫಾ ವರ್ಲ್ಡ್ ಕಪ್ ಆತಿಥ್ಯ ವಹಿಸಿರುವ ಕತಾರ್, ಈಗ ತನ್ನ ಕಾರ್ಮಿಕ ನೀತಿಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ. ಕಾರ್ಮಿಕರ ಕನಿಷ್ಠ ವೇತನ ಶೇ.25ರಷ್ಟು, ಅಂದರೆ 1000 ರಿಯಲ್ಸ್ (ಸುಮಾರು 19,556)ನಷ್ಟು ಏರಿಕೆ ಮಾಡುವುದು ಸೇರಿದಂತೆ ವಿವಿಧ ಕಾರ್ಮಿಕ ಸ್ನೇಹಿ ನೀತಿಯನ್ನು ಕತಾರ್ ಅಳವಡಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ. ಇದು ಭಾರತದ ಲಕ್ಷಾಂತರ ವಲಸಿಗ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವನ್ನುಂಟು ಮಾಡಲಿದೆ ಎನ್ನಲಾಗಿದೆ.

- Advertisement -

ಅಲ್ಲದೆ, ಬಹು ಟೀಕೆಗೆ ಗುರಿಯಾಗಿದ್ದ ‘ಕಫಾಲ’ ವ್ಯವಸ್ಥೆ, ಅಂದರೆ ಉದ್ಯೋಗ ಬದಲಾವಣೆಗೆ ತಮ್ಮ ಪೂರ್ವ ಉದ್ಯೋಗದಾತರ ಅನುಮತಿ ಪಡೆಯ ಬೇಕಾದ ಅನಿವಾರ್ಯತೆಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಇದೀಗ ಕತಾರ್ ನಲ್ಲಿ ಕಾರ್ಮಿಕರು ನಿರಾಪೇಕ್ಷಣ ಪತ್ರ ಸಲ್ಲಿಸದೆಯೇ ತಮ್ಮ ಉದ್ಯೋಗ ಬದಲಿಸಿಕೊಳ್ಳಬಹುದು.

ಮೊದಲ ಎರಡು ವರ್ಷದ ಒಪ್ಪಂದದ ಮೊದಲು ಉದ್ಯೋಗ ಬದಲಿಸುವುದಾದರೆ, ಎರಡು ತಿಂಗಳು ಮುಂಚಿತವಾಗಿ ಮತ್ತು ಎರಡು ವರ್ಷದ ನಂತರವಾದರೆ, ಒಂದು ತಿಂಗಳು ಮುಂಚಿತವಾಗಿ ಉದ್ಯೋಗ ಬದಲಿಸುತ್ತಿರುವ ಬಗ್ಗೆ ಲಿಖಿತ ನೋಟಿಸ್ ನೀಡಬೇಕಾಗಿದೆ ಎಂದು ಕತಾರ್ ನ ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಆಡಳಿತಾತ್ಮಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ಎರಡು ಮಹತ್ವದ ಬದಲಾವಣೆಗಳ ಬಗ್ಗೆ ಕತಾರ್ ದೊರೆ 2019ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ಘೋಷಿಸಿದ್ದರು. ಈಗ ಅದು ಕಾನೂನಾಗಿ ಸಹಿ ಮಾಡಲ್ಪಟ್ಟಿದೆ.

- Advertisement -

ಕತಾರ್ ನಲ್ಲಿ ಭಾರತದ ಸುಮಾರು 6,30,000ಕ್ಕೂ ಅಧಿಕ ವಲಸಿಗರಿದ್ದು, ಈ ಕಾರ್ಮಿಕ ನೀತಿ ಬದಲಾವಣೆ ಅನಿವಾಸಿ ಭಾರತೀಯರಿಗೆ ಹೆಚ್ಚಿನ ಅನುಕೂಲ ಮಾಡಲಿದೆ.  



Join Whatsapp