ಮಂಗಳೂರು: ನಗರದ ಕಂಕನಾಡಿಯ ಫ್ಲ್ಯಾಟ್‌ವೊಂದರ ಐದನೆ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಮುಹಮ್ಮದ್ ಇಮ್ತಿಯಾಝ್ ಎಂಬವರ ಪುತ್ರಿ ಸೆಹರಾ ಇಮ್ತಿಯಾಝ್ (15) ಮೃತಪಟ್ಟ ಬಾಲಕಿ. ನಗರದ ಲೂರ್ಡ್ಸ್ ಶಾಲೆಯಲ್ಲಿ ಎಸೆಸೆಲ್ಸಿ ಕಲಿಯುತ್ತಿರುವ ಈಕೆ ಬುಧವಾರ ಸಂಜೆ ಸುಮಾರು 4:30ಕ್ಕೆ ಮನೆಯ ಹಾಲ್ ಗೆ ತಾಗಿಕೊಂಡಿರುವ ಬಾಲ್ಕನಿಯ ಸೈಡ್ ಕರ್ಟನ್‌ಗಳನ್ನು ಸರಿ ಮಾಡಲು ಕುರ್ಚಿಯ ಮೇಲೆ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿಬಿದ್ದರೆನ್ನಲಾಗಿದೆ.
ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈಕೆಯನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ 5:40ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಕದ್ರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.