ಮುಸ್ಲಿಮರ ಮೃತ ದೇಹ ದಫನ ಮಾಡುವ ಬದಲು ದಹಿಸಬೇಕು : ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

Prasthutha|


ಉನ್ನಾವೋ : ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡುವ ಬದಲು ದಹನ ಮಾಡಬೇಕೆಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ 20ಕೋಟಿ ಮುಸ್ಲಿಮರು ಇದ್ದಾರೆ. ಇವರೆಲ್ಲರನ್ನೂ ಸಮಾಧಿ ಮಾಡಿದರೆ ಎಷ್ಟೊಂದು ಭೂಮಿ ಬೇಕಾದೀತು ಎಂದು ಸಾಕ್ಷಿ ಮಹಾರಾಜ್ ಕೇಳಿದ್ದಾರೆ.
ಒಂದು ಗ್ರಾಮದಲ್ಲಿ ಲಭ್ಯವಿರುವ ಸ್ಮಶಾನಗಳು ಮತ್ತು ಖಬರಸ್ಥಾನಗಳ ಗಾತ್ರವು ಅಲ್ಲಿ ವಾಸಿಸುವ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿರಬೇಕೆಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಮುಸ್ಲಿಮರು ಗ್ರಾಮಗಳಲ್ಲಿ ದೊಡ್ಡ ಸ್ಮಶಾನಗಳನ್ನು ಹೊಂದಿರುವುದರಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಮುಸ್ಲಿಮರ ವಿರುದ್ಧದ ವಿವಾದಾತ್ಮಕ ಹೇಳಿಕೆಗಳಿಂದ ಕುಖ್ಯಾತಿ ಪಡೆದ ಸಂಸದ ಸಾಕ್ಷಿ ಮಹಾರಾಜ್ ಆರೋಪಿಸಿದ್ದಾರೆ.
ಬಾಂಗಾರ್ ಮಾವ್ ವಿಧಾನಸಭೆ ಉಪಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಭಾನುವಾರ ನಡೆದ ‘ನುಕಾಡ್ ಸಬಾ’ ದಲ್ಲಿ ಈ ಹೇಳಿಕೆ ನೀಡಿದ್ದಾರೆ. ಗ್ರಾಮದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮಾತ್ರ ಇದ್ದರೂ ಸ್ಮಶಾನ ತುಂಬಾ ದೊಡ್ಡದಿರುತ್ತದೆ. ನೀವು (ಹಿಂದೂಗಳು) ಸತ್ತವರನ್ನು ಹೊಲಗಳಲ್ಲಿ ಅಥವಾ ಗಂಗೆಯಲ್ಲಿ ಸಂಸ್ಕಾರ ನಡೆಸುತ್ತೀರಿ. ಇದು ದೊಡ್ಡ ಅನ್ಯಾಯ ಎಂದು ಅವರು ಹೇಳಿದರು.
ದೇಶದಲ್ಲಿ 2.5 ಕೋಟಿ ಸನ್ಯಾಸಿಗಳಿದ್ದಾರೆ. ನಾವು ಅವರಿಗೆ ಸಮಾಧಿಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ ಅವರಿಗೆ ಎಷ್ಟು ಭೂಮಿ ಬೇಕಾಗಬಹುದೆಂದು ಆಲೋಚಿಸಿರಿ. ಸಮಾಧಿ ಮಾಡಲು ಯಾವುದೇ ಸ್ಥಳವನ್ನು ಅನುಮತಿಸಬಾರದು ಮತ್ತು ಎಲ್ಲಾ ಧರ್ಮಗಳು ಮೃತಪಟ್ಟವರನ್ನು ದಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಹೀಗೆ ಮುಂದುವರಿದರೆ ಕೃಷಿ ಮಾಡಲು ಭೂಮಿ ಇರುವುದಿಲ್ಲ ಎಂಬುದು ಅವರ ಸಮರ್ಥನೆಯಾಗಿದೆ.

Join Whatsapp