ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ಒಂದು ವರ್ಷ | ಕರ್ಫ್ಯೂ ಜಾರಿ

Prasthutha|

ಶ್ರೀನಗರ : ಜಮ್ಮು-ಕಾಶ್ಮೀರದ ಆಡಳಿತ ಶ್ರೀನಗರದಲ್ಲಿ ಸೋಮವಾರದಿಂದಲೇ ಕರ್ಫ್ಯೂ ಜಾರಿಗೊಳಿಸಿದೆ. ಸಂವಿಧಾನದ ಪರಿಚ್ಛೇದ 370ರಡಿ ನೀಡಲಾಗಿದ್ದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದತಿ ಮಾಡಿದುದಕ್ಕೆ ಬುಧವಾರ (ಆ.5) ಒಂದು ವರ್ಷ ಪೂರ್ಣಗೊಳ್ಳುವುದರಿಂದ, ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಸಂಭವಿಸಬಹುದಾದ ನಿರೀಕ್ಷೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

- Advertisement -

ತಕ್ಷಣದಿಂದ ಜಾರಿ ಬರುವಂತೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಂಗಳವಾರ ಮತ್ತು ಬುಧವಾರದ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಶ್ರೀನಗರ ಜಿಲ್ಲಾಧಿಕಾರಿ ಶಹೀದ್ ಇಕ್ಬಾಲ್ ಹೇಳಿದ್ದಾರೆ.

ಆ.5ರಂದು ಕಪ್ಪು ದಿನವೆಂದು ಆಚರಿಸಲು ಹಲವಾರು ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ಹಾಗೂ ಪ್ರತ್ಯೇಕತವಾದಿಗಳು ಯೋಜಿಸಿದ್ದು, ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಸಾಧ್ಯತೆಯ ಬಗ್ಗೆ ಶ್ರೀನಗರ ಪೊಲೀಸ್ ವರಿಷ್ಠರಿಗೆ ಮಾಹಿತಿಗಳು ದೊರಕಿವೆ ಎಂದು ಅವರು ತಿಳಿಸಿದ್ದಾರೆ.

- Advertisement -

ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯುಂಟು ಮಾಡುವಂತಹ ನಿರ್ದಿಷ್ಟ ಮಾಹಿತಿಗಳು ಲಭ್ಯವಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೋವಿಡ್ 19 ನಿಯಂತ್ರಣದ ಉದ್ದೇಶದಿಂದಲೂ ಹೆಚ್ಚು ಜನರು ಗುಂಪುಗೂಡುವುದು ಒಳ್ಳೆಯದಲ್ಲ ಎಂದು ಚೌಧರಿ ತಿಳಿಸಿದ್ದಾರೆ.

ಆದಾಗ್ಯೂ, ಕೋವಿಡ್ 19 ಸೇವೆಯಲ್ಲಿರುವ ಸಿಬ್ಬಂದಿ ನಿಯಂತ್ರಣಗಳಿಂದ ಮುಕ್ತರಾಗಿದ್ದಾರೆ. ಅವರು ತಮ್ಮ ಓಡಾಟದ ವೇಳೆ ಸೂಕ್ತ ಪಾಸ್ ಅನ್ನು ಹೊಂದಿರಬೇಕಾಗುತ್ತದೆ.

ಸಂವಿಧಾನದ 370 ನೇ ವಿಧಿ ಮತ್ತು ಜಮ್ಮುಕಾಶ್ಮೀರ:

ಭಾರತೀಯ ಸಂವಿಧಾನದ 370ನೇ ವಿಧಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ವಾಯತ್ತೆಯ ಸ್ಥಾನಮಾನವನ್ನು ನೀಡಿತ್ತು. ಈ ವಿಧಿಯನ್ನು ಸಂವಿಧಾನದ ಭಾಗ XXIರಲ್ಲಿ ರಚಿಸಲಾಗಿದೆ. 2019 ಆ.5ರಂದು ಈ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದುಗೊಳಿಸಿತು. 1947ರಿಂದಲೂ ವಿವಾದಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ನೆರೆ ರಾಷ್ಟ್ರಗಳ ಹಸ್ತಕ್ಷೇಪದ ಆರೋಪ ಕೇಳುತ್ತಲೇ ಇದೆ. ಪರಿಚ್ಛೇದ 370ರ ಪ್ರಕಾರ, ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯ ಧ್ವಜ, ಪ್ರತ್ಯೇಕ ಸಂವಿಧಾನ ಮತ್ತು ಆಂತರಿಕ ಭದ್ರತೆಯ ಸ್ವಾಯತ್ತೆ ನೀಡುವ ಅಧಿಕಾರ ಸಂವಿಧಾನ ನೀಡಿತ್ತು. ಆರಂಭದಲ್ಲಿ, ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ತಾತ್ಕಾಲಿಕ ನೆಲೆಯಲ್ಲಿ ನೀಡಲಾಗಿದ್ದ ಈ ಸ್ಥಾನಮಾನ, ಕಾರಣಾಂತರಗಳಿಂದ ಮುಂದುವರಿಸಿಕೊಂಡು ಬರಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಸಂವಿಧಾನದ 370 ಅನ್ನು ರದ್ದುಗೊಳಿಸುವ ಅಥವಾ ಅದನ್ನು ಅಳವಡಿಸಿಕೊಳ್ಳುವ ಅಧಿಕಾರವನ್ನು ಜಮ್ಮು-ಕಾಶ್ಮೀರ ವಿಧಾನಸಭೆಗೆ ನೀಡಲಾಗಿತ್ತು. ವಿಧಾನಸಭೆಯ ಸಲಹೆಯ ಪ್ರಕಾರ, ಭಾರತೀಯ ಸಂವಿಧಾನದ ಈ ವಿಧಿಯನ್ನು ಜಮ್ಮು-ಕಾಶ್ಮೀರಕ್ಕೆ ಅನ್ವಯಗೊಳಿಸುವ ಆದೇಶವನ್ನು 1954ರಲ್ಲಿ ರಾಷ್ಟ್ರಪತಿಯವರು ಜಾರಿಗೊಳಿಸಿದ್ದರು. ಜಮ್ಮು-ಕಾಶ್ಮೀರ ವಿಧಾನಸಭೆಯು ಪರಿಚ್ಛೇಧ 370ರ ರದ್ದತಿಯ ನಿರ್ಣಯ ಕೈಗೊಳ್ಳದ ಕಾರಣ, ಸಂವಿಧಾನದಲ್ಲಿ ಅದು ಶಾಶ್ವತವಾಗಿ ಉಳಿಯಿತು. ಈ ಪರಿಚ್ಛೇಧದೊಂದಿಗೆ ಪರಿಚ್ಛೇಧ 35ಎಯಲ್ಲಿ ಜಮ್ಮು-ಕಾಶ್ಮೀರದ ನಾಗರಿಕರು ಪ್ರತ್ಯೇಕ ಕಾನೂನಿಗೆ ಅನುಗುಣವಾಗಿ ಜೀವಿಸುತ್ತಿದ್ದರು.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಬಳಿಕ ದೇಶದಲ್ಲಿ ಜಮ್ಮು-ಕಾಶ್ಮೀರ ವಿಚಾರದಲ್ಲಿ ರಾಜಕೀಯ ವಿವಾದಗಳು ಆರಂಭವಾದವು. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪರ ಸಂಘಟನೆಗಳು ಇದನ್ನು ಹಿಂದೂ-ಮುಸ್ಲಿಂ ವಿಭಜನೆಯ ರಾಜಕಾರಣಕ್ಕೆ ಬಳಸಿಕೊಂಡವು. 2019ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಬಗ್ಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದರಂತೆಯೇ, ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ ಬಳಿಕ 2019, ಆ.5ರಂದು ಮಹತ್ವದ ನಿರ್ಧಾರ ಕೈಗೊಂಡ ಬಿಜೆಪಿ ಸರ್ಕಾರ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಈ ಕುರಿತ ನಿರ್ಣಯಗಳನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತದೊಂದಿಗೆ ಕೈಗೊಳ್ಳಲಾಯಿತು. ಜಮ್ಮು-ಕಾಶ್ಮೀರವನ್ನು ವಿಭಜಿಸಿ, ರಾಜ್ಯದ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಾಡುಗೊಳಿಸಲಾಯಿತು. ಕೆಲವು ಪಕ್ಷಗಳು ಬಿಜೆಪಿಯ ಈ ನಿರ್ಧಾರವನ್ನು ವಿರೋಧಿಸಿದವು. ಇನ್ನೊಂದೆಡೆ, ಸುಪ್ರೀಂ ಕೋರ್ಟ್ ನಲ್ಲಿ ಈ ಸಂಬಂಧ ಹಲವು ಅರ್ಜಿಗಳು ದಾಖಲಾಗಿವೆ. ಹೀಗಾಗಿ ಇದರ ವಿಚಾರಣೆಗೆ ಐವರು ನ್ಯಾಯಮೂರ್ತಿಗಳ ಪೀಠವನ್ನು ರಚಿಸಲಾಗಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದಕ್ಕೂ ಮೊದಲು ಅಲ್ಲಿನ ಸಾಕಷ್ಟು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಸಾವಿರಾರು ಅರೆಸೇನಾ ಪಡೆ ಯೋಧರನ್ನು ಜಮ್ಮು-ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಕೆಲವು ದಿನಗಳ ಲಾಕ್ ಡೌನ್ ಘೋಷಿಸಲಾಯಿತು. ಪ್ರತಿಭಟನೆಗಳು ನಡೆಯದಂತೆ ತಡೆಹಿಡಿಯಲಾಯಿತು. ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಎಲ್ಲ ವಿಚಾರಗಳಲ್ಲಿ ನಿಯಂತ್ರಣ ಸಾಧಿಸಲಾಯಿತು. ಪ್ರದೇಶದಲ್ಲಿದ್ದ ಹೊರ ರಾಜ್ಯಗಳ ಪ್ರವಾಸಿಗರು, ವಿದ್ಯಾರ್ಥಿಗಳು ಮುಂಚೆಯೇ ಜಮ್ಮು-ಕಾಶ್ಮೀರದಿಂದ ತೆರವುಗೊಳ್ಳುವಂತೆ ಸೂಚಿಸಲಾಗಿತ್ತು. ಬಹುತೇಕ ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಆ.16ರ ನಂತರ ಹಂತಹಂತವಾಗಿ ಕರ್ಫ್ಯೂ ಸಡಿಸಲಾಯಿತು.

ಭರವಸೆಗಳು ಈಡೇರಿವೆಯೇ?

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯಿಂದ ರಾಜ್ಯದಲ್ಲಿ ಶಾಂತಿ ನೆಲೆಸಲಿದೆ, ಉಗ್ರವಾದ ಕೊನೆಗೊಳ್ಳಲಿದೆ. ದೇಶದ ಎಲ್ಲ ರಾಜ್ಯಗಳಂತೆ ಭಾರತ ಸರ್ಕಾರದ ಎಲ್ಲಾ ಕಾನೂನುಗಳು ಇಲ್ಲಿಗೆ ಅನ್ವಯವಾಗಲಿದೆ. ಭಾರತದ ಯಾವುದೇ ನಾಗರಿಕ ಜಮ್ಮು-ಕಾಶ್ಮೀರದಲ್ಲಿ ಜಮೀನು ಖರೀದಿಸಬಹುದು, ಉದ್ಯಮ ನಡೆಸಬಹುದು ಮುಂತಾದ ಹಲವಾರು ಭರವಸೆಗಳನ್ನು ವಿಶೇಷ ಸ್ಥಾನಮಾನ ರದ್ದತಿಯ ವೇಳೆ ನೀಡಲಾಗಿತ್ತು. ಆದರೆ, ವಿಶೇಷ ಸ್ಥಾನಮಾನದ ರದ್ದತಿಯ ಒಂದು ವರ್ಷದ ಬಳಿಕವೂ ಜಮ್ಮು-ಕಾಶ್ಮೀರದ ಸ್ಥಿತಿ ಇನ್ನೂ ಸುಧಾರಿಸಿದಂತಿಲ್ಲ. ಗೃಹ ಬಂಧನ, ಪೊಲೀಸರ ವಶದಲ್ಲಿದ್ದ ಸಾಕಷ್ಟು ಮಂದಿ ಇದೀಗ ಒಂದು ವರ್ಷದ ಸಮೀಪದಲ್ಲಿ ಬಿಡುಗಡೆಯಾಗುತ್ತಿದ್ದಾರೆ. ಅದೂ ನ್ಯಾಯಾಲಯಗಳ ಒತ್ತಡಕ್ಕೆ ಒಳಗಾಗಿ ಆಡಳಿತ ಈ ಬಿಡುಗಡೆ ಮಾಡುತ್ತಿದೆ. ವಿಶೇಷ ಸ್ಥಾನಮಾನ ರದ್ದತಿಯ ಬಳಿಕವೂ ಉಗ್ರವಾದಿಗಳ ದಾಳಿ ಮುಂದುವರಿದಿದ್ದು, ಅದರಲ್ಲಿ ಮಡಿದವರ ಸಂಖ್ಯೆ ಪಾಕಿಸ್ತಾನಿಯರಿಗಿಂತ ಸ್ಥಳೀಯರೇ ಹೆಚ್ಚಿದ್ದಾರೆ ಎಂಬ ವರದಿಯೊಂದು ಲಭಿಸಿದೆ. ಈ ಹಿನ್ನೆಲೆಯಲ್ಲಿ ಉಗ್ರವಾದವೂ ಕೊನೆಗೊಂಡಿಲ್ಲ ಎಂಬುದು ಸಾಬೀತಾಗುತ್ತಿದೆ. ಇನ್ನು, ಭೂಮಿ ಖರೀದಿ, ಉದ್ಯಮ ಸ್ಥಾಪನೆಯಾದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

Join Whatsapp