ಕೇವಲ ಒಂದು ತಿಂಗಳಲ್ಲಿ 271 ಮಾಧ್ಯಮ ಸಂಸ್ಥೆಗಳಿಂದ ‘ತಬ್ಲೀಗಿ ಜಮಾಅತ್’ ಕುರಿತ 11,074 ವರದಿ ಪ್ರಕಟ!

Prasthutha|

ನವದೆಹಲಿ : ‘ತಬ್ಲೀಗಿ ಜಮಾಅತ್’ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ…! ಅಷ್ಟೊಂದು ಕತೆಗಳನ್ನು ನಮ್ಮ ಮಾಧ್ಯಮಗಳು ಈ ‘ತಬ್ಲೀಗಿ ಜಮಾಅತ್’’ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಪ್ರಸಾರ ಮಾಡಿದ್ದವು. ದೇಶದಲ್ಲಿ ಮುಸ್ಲಿಮರನ್ನು ಖಳನಾಯಕರಂತೆ ಬಿಂಬಿಸಲು ಪ್ರಗತಿಪರರ ಹಣೆಪಟ್ಟಿ ಕಟ್ಟಿಕೊಂಡ ಪತ್ರಕರ್ತರಿಂದ ಹಿಡಿದು ಬಿಜೆಪಿ ಬೆಂಬಲಿತ ಮಾಧ್ಯಮಗಳ ವರೆಗೆ ಪ್ರತಿಯೊಂದು ಸುದ್ದಿವಾಹಿನಿ, ಪತ್ರಿಕೆಗಳು ದಿನಬೆಳಗಾದರೆ, ತಬ್ಲೀಗಿ ಜಮಾಅತ್ ಬಗ್ಗೆ ಬಣ್ಣಬಣ್ಣದ ಕತೆಗಳನ್ನು ಹೆಣೆದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದವು. ಎಲ್ಲಿವರೆಗೆ ಎಂದರೆ, ಮಾ.20ರಿಂದ ಏ.20ರ ವರೆಗೆ ಕೇವಲ ಒಂದು ತಿಂಗಳಲ್ಲಿ 271 ಮಾಧ್ಯಮ ಸಂಸ್ಥೆಗಳು, ಸುಮಾರು 11,074 ವರದಿಗಳನ್ನು ತಬ್ಲೀಗಿ ಜಮಾಅತ್ ಕುರಿತು ಮಾಡಿವೆ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ‘ಸಿಯಾಸತ್’ ವೆಬ್ ವಾಹಿನಿ ಪ್ರಕಟಿಸಿರುವ ವರದಿಯೊಂದರಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

- Advertisement -

ಇನ್ನೊಂದೆಡೆ, ತಬ್ಲೀಗಿ ಜಮಾಅತ್ ವಿಚಾರದಲ್ಲಿ ಮಾಧ್ಯಮಗಳ ಇಬ್ಬಂದಿತನವನ್ನು ಬಾಂಬೆ ಹೈಕೋರ್ಟ್ ಕೂಡ ಬಯಲಿಗೆಳೆದಿದೆ. ಕೊರೋನ ಸೋಂಕು ಹರಡುವ ನೆಪದಲ್ಲಿ ತಬ್ಲೀಗಿ ಜಮಾಅತ್ ಸದಸ್ಯರನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಹೇಗೆ ಗುರಿ ಮಾಡಲಾಯಿತು ಮತ್ತು ತಬ್ಲೀಗಿ ಜಮಾಅತ್ ಸದಸ್ಯರನ್ನು ಹೇಗೆ ಬಲಿಪಶುಗಳನ್ನಾಗಿ ಮಾಡಲಾಯಿತು ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ. ತಾಕತ್ತಿದ್ದರೆ, ಈ ಮಾನಸಿಕ ಅಸ್ವಸ್ಥ ಮನಸ್ಥಿತಿಯ ಮಾಧ್ಯಮಗಳು ಈಗ ಕೋರ್ಟ್ ವಿರುದ್ಧ ಟ್ರೋಲ್ ಮಾಡುತ್ತವೆಯೇ ಕಾದು ನೋಡಬೇಕು.

ಕಠಿಣ ತರಾಟೆಯ ಪದಗಳಿಂದ ಕೂಡಿದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಶುಕ್ರವಾರ ಹೊರಬಿದ್ದಿದೆ. ಆ ಪ್ರಕಾರ, ತಬ್ಲೀಗಿ ಜಮಾಅತ್ ಗೆ ಸೇರಿದ 29 ವಿದೇಶಿ ಪ್ರಜೆಗಳು ಮತ್ತು 9 ಮಂದಿ ಭಾರತೀಯರ ವಿರುದ್ಧದ ಎಫ್ ಐಆರ್ ಅನ್ನು ರದ್ದುಗೊಳಿಸಿ ಕೋರ್ಟ್ ತೀರ್ಪು ನೀಡಿದೆ. ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಭಾಗವಹಿಸಿದ್ದುದಕ್ಕಾಗಿ ಅವರ ವಿರುದ್ಧ ಅಪಪ್ರಚಾರಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ, ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.

- Advertisement -

ಆದರೆ, ಈ ಆರೋಪಗಳನ್ನು ತಿರಸ್ಕರಿಸಿರುವ ಕೋರ್ಟ್, ಸಿಎಎ ಪ್ರತಿಭಟನೆಯ ಬಳಿಕ, ತಬ್ಲೀಗಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಭಾರತೀಯ ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಲಾಗಿದೆ ಮತ್ತು ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದಿದೆ.

ಕೊರೋನಾ ಸೋಂಕು ತಡೆಗಟ್ಟುವುದಕ್ಕಾಗಿ ಸರಕಾರಗಳು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದವು. ಲಾಕ್ ಡೌನ್ ಘೋಷಣೆಯಾಗಿತ್ತು. ಇದಕ್ಕೂ ಮೊದಲು ಸಿಎಎ/ಎನ್ ಆರ್ ಸಿ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದವು. ಈ ನಡುವೆ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಪ್ರತಿಭಟನೆಗಳ ಪ್ರಭಾವ ಕಡಿಮೆಯಾಗ ತೊಡಗಿತ್ತು. ಇದೇ ಅವಧಿಯನ್ನು ಬಳಸಿಕೊಂಡ ಮಾಧ್ಯಮಗಳು ಮುಸ್ಲಿಮರನ್ನು ಕೆಟ್ಟವರಾಗಿ ಬಿಂಬಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಬಹಿರಂಗವಾಗಿಯೇ ಮಾಡಿದವು. ಇದರ ನಡುವೆ, ತಬ್ಲೀಗಿ ಜಮಾಅತ್ ಸಮಾವೇಶ ಇವರಿಗೆ ಬಹುದೊಡ್ಡ ಅಸ್ತ್ರವಾಗಿ ಲಭಿಸಿತ್ತು. ಇದನ್ನು ಬಳಸಿಕೊಂಡು ಇನ್ನಿಲ್ಲದ ಕಟ್ಟುಕತೆಗಳನ್ನು ಸೃಷ್ಟಿಸಿ, ಲೀಲಾಜಾಲವಾಗಿ ಪ್ರಕಟಿಸಲಾರಂಭಿಸಿದವು. ಪ್ರತಿನಿತ್ಯ ದಿನದ 24 ಗಂಟೆಗಳೂ ತಬ್ಲೀಗಿಗಳ ಕುರಿತಂತೆ ಚರ್ಚಿಸುವ ನೆಪದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಮಾಧ್ಯಮಗಳು ಟೊಂಕಕಟ್ಟಿ ನಿಂತಿದ್ದವು. ಜನರ ಹೋರಾಟಗಳ ಕುರಿತಂತೆ ಮೌನವಾಗಿದ್ದ ಮಾಧ್ಯಮಗಳು, ಇದ್ದಕ್ಕಿದ್ದಂತೆ ಎಚ್ಚರಗೊಂಡು, ತಬ್ಲೀಗಿಗಳ ನೆಪದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರಲಾರಂಭಿಸಿದ್ದವು.

ಏಪ್ರಿಲ್ 1ರಂದು ಸರಕಾರ ಮೊದಲ ಬಾರಿಗೆ ದೇಶದಲ್ಲಿ ಕೊರೋನದ ಮೂಲ ತಬ್ಲೀಗಿ ಸಮಾವೇಶ ಎಂದು ಅಲ್ಪ ಸಾಕ್ಷಿಯೊಂದಿಗೆ ಪ್ರಕಟಿಸಿತು. ಇದನ್ನಿಟ್ಟುಕೊಂಡು, ಇಸ್ಲಾಮಾಫೋಬಿಯಾದ ಅಲೆಯೇ ಎದ್ದುಬಿಟ್ಟಿತು. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸುಳ್ಳುಗಳನ್ನು ಹರಡಲಾಯಿತು. ಮಾಧ್ಯಮಗಳು ಬಿಜೆಪಿ ಐಟಿ ಸೆಲ್ ನಂತೆಯೇ ಕಾರ್ಯ ನಿರ್ವಹಿಸ ತೊಡಗಿದವು. #CoronaJihad ಹ್ಯಾಶ್ ಟ್ಯಾಗ್ ಸೃಷ್ಟಿಯಾಯಿತು. ಎಬಿಪಿ ಲೈವ್ ನಂತಹ ಚಾನೆಲ್ ಕೂಡ ಜಮಾಅತ್ ಸದಸ್ಯರನ್ನು ‘ಮಾನವ್ ಬಾಂಬ್’ ಎಂದು ಕರೆಯುತು. ಬಿಜೆಪಿ ನಾಯಕರ ಮನಸ್ಥಿತಿಯ ಮಾತುಗಳು ಮಾಧ್ಯಮಗಳಲ್ಲಿ ಪ್ರಕಟವಾದವು. ಜೀ ನ್ಯೂಸ್ ನ ಸುಧೀರ್ ಚೌಧರಿ ತಮ್ಮ ಕಾರ್ಯಕ್ರಮದಲ್ಲಿ ‘ತಬ್ಲೀಗಿ ಜಮಾಅತ್ ದೇಶದ ಬೆನ್ನಿಗೆ ಇರಿಯಿತು’ ಎಂಬಂತಹ ಮಾತುಗಳನ್ನಾಡುತ್ತಾರೆ.

ಮಾ.20ರಿಂದ ಏ.20ರ ವರೆಗೆ ಭಾರತದ ಮಾಧ್ಯಮಗಳು ತಬ್ಲೀಗಿ ಜಮಾಅತ್ ಬಗ್ಗೆ ಮಾಡಿರುವ ವರದಿಗಳ ಕುರಿತಂತೆ ಫ್ರೆಂಚ್ ಇನ್ಸ್ ಟಿಟ್ಯೂಟ್ ಆಫ್ ಪಾಂಡಿಚೇರಿಯ ಸಂಶೋಧಕಿ ಸೌಂದರ್ಯಾ ಅಯ್ಯರ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಶೋಯಿಬಾಲ್ ಚಕ್ರವರ್ತಿ ಎಂಬವರು ಅಧ್ಯಯನ ಮಾಡಿದ್ದಾರೆ. ಆ ಪ್ರಕಾರ, ಈ ಒಂದು ತಿಂಗಳ ಅವಧಿಯಲ್ಲಿ 271 ಮಾಧ್ಯಮ ಮೂಲಗಳು 11,074 ವರದಿಗಳನ್ನು ತಬ್ಲೀಗಿ ಜಮಾಅತ್ ಕುರಿತಂತೆ ಮಾಡಿವೆ. ಇವು ಲೆಕ್ಕಕ್ಕೆ ಸಿಕ್ಕಿರುವುದು. ದೇಶದಲ್ಲಿ ಇನ್ನೂ ನೂರಾರು ಚಾನೆಲ್ ಗಳಿವೆ, ಪತ್ರಿಕೆಗಳಿವೆ. ಹಾಗಾದರೆ, ಎಷ್ಟೊಂದು ಸುಳ್ಳು ಸುದ್ದಿಗಳನ್ನು ‘ತಬ್ಲೀಗಿ ಜಮಾಅತ್’ ನೆಪದಲ್ಲಿ ಹರಡಲಾಗಿದೆ ಎಂದರೆ ಊಹಿಸುವುದು ಕಷ್ಟವೇನಲ್ಲ.

ತಬ್ಲೀಗಿ ಮತ್ತು ಜಮಾಅತ್ ಶಬ್ದಗಳ ಜೊತೆ ‘ಕೊರೋನಾ ವೈರಸ್’, ‘ದೆಹಲಿ’, ‘ಲಾಕ್ ಡೌನ್’ ಮುಂತಾದ ಶಬ್ದಗಳು ಯಥೇಚ್ಚವಾಗಿ ಕಂಡುಬರುತ್ತಿವೆ. ‘ಉಲ್ಲಂಘನೆ’ ‘ಕ್ರೈಮ್’ ‘ಉಗಿಯುವುದು’ ‘ಭಯೋತ್ಪಾದಕ’ ಮತ್ತು ‘ಜಿಹಾದ್’ ಮುಂತಾದ ಶಬ್ದಗಳೂ ಇವುಗಳೊಂದಿಗೆ ಸಾಕಷ್ಟು ಬಾರಿ ಪುನಾರಾವರ್ತನೆಗೊಂಡಿವೆ. ಈ ವರದಿಗಳು ಇಸ್ಲಾಮಾಫೋಬಿಯಾದ ಸುಳ್ಳು ಸುದ್ದಿಗಳು ಮತ್ತು ದ್ವೇಷ ಭಾಷಣಗಳನ್ನು ಹರಡಿವೆ ಎಂದು ಸಂಶೋಧಕರು ತಮ್ಮ ಲೇಖನವೊಂದರಲ್ಲಿ ತಿಳಿಸಿದ್ದಾರೆ.
ಆದರೆ, ಹೈಕೋರ್ಟ್ ತೀರ್ಪಿನ ಬಳಿಕ, ಕೊರೋನಾ ಸಂಕಷ್ಟದ ಸಮಯದಲ್ಲೂ ಮಾಧ್ಯಮಗಳು ಮತ್ತು ಪೊಲೀಸರು ದೇಶದ ವಾತಾವರಣವನ್ನು ಕೋಮು ಧ್ರುವೀಕರಣಕ್ಕೆ ಬಳಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಕೊರೋನಾ ಸೋಂಕಿನ ಸಂದರ್ಭ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುವುದನ್ನು ಪ್ರವರ್ತಿಸುವುದು ಬಿಟ್ಟು, ಇಂತಹ ಅನಗತ್ಯ ದ್ವೇಷ ರಾಜಕಾರಣವನ್ನು ಮಾಡಲಾಯಿತು.

Join Whatsapp