ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ| ಟೀಮ್‌ ಇಂಡಿಯಾ ಕ್ಲೀನ್‌ ಸ್ವೀಪ್‌ ಸಾಧನೆ

Prasthutha|

ಹರಾರೆ; ಕ್ಲೀನ್‌ ಸ್ವೀಪ್‌ ಅವಮಾನದಿಂದ ಪಾರಾಗಲು ಕೊನೆಯ ತನಕ ಹೋರಾಡಿದರೂ ಜಿಂಬ್ವಾಬೆಗೆ ಗೆಲುವು ಒಲಿಯಲಿಲ್ಲ. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ಅಜೇಯ ಓಟ ಮುಂದುವರಿಸಿದ ಟೀಮ್‌ ಇಂಡಿಯಾ, ಮೂರು ಏಕದಿನ ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿದೆ. ಪ್ರಸಕ್ತ ವರ್ಷ ಟೀಮ್‌ ಇಂಡಿಯಾ ಗೆಲ್ಲುತ್ತಿರುವ 10ನೇ ಸರಣಿ ಇದಾಗಿದೆ. ಅದರಲ್ಲೂ ಮೂರು ಏಕದಿನ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಹೊಸ ದಾಖಲೆಯಾಗಿದೆ. ಈ ಗೆಲುವಿನೊಂದಿಗೆ ಜಿಂಬಾಬ್ವೆ ವಿರುದ್ಧ ಸತತ 15 ಏಕದಿನ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದಂತಾಗಿದೆ.

- Advertisement -

ಭಾರತ ನೀಡಿದ್ದ 290 ರನ್‌ಗಳ ಗೆಲುವಿನ ಗುರಿಯನ್ನು ಮುಟ್ಟಲು ಜಿಂಬಾಬ್ವೆ, ಅಂತಿಮ ಓವರ್‌ವರೆಗೂ ಹೋರಾಟವನ್ನು ಚಾಲ್ತಿಯಲ್ಲಿರಿಸಿತ್ತು. ಆದರೆ 49.3 ಓವರ್‌ಗಳಲ್ಲಿ 276 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 13 ರನ್‌ಗಳಿಂದ ಗೆಲುವಿನಿಂದ ದೂರ ಉಳಿಯಿತು. ಮಧ್ಯಮ ಕ್ರಮಾಂಕದಲ್ಲಿ ಸಿಖಂದರ್‌ ರಝಾ ಅಮೋಘ ಶತಕಗಳಿಸುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. 95 ಎಸೆತಗಳನ್ನು ಎದುರಿಸಿದ ರಝಾ, 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 115 ರನ್‌ಗಳಿಸಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು.

ರಝಾ ಕ್ರೀಸ್‌ನಲ್ಲಿರುವಷ್ಟು ಹೊತ್ತು ಜಿಂಬಾಬ್ವೆ ಪಂದ್ಯ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಆದರೆ ಫಿನಿಶರ್‌ ಪಾತ್ರವನ್ನು ನಿಭಾಯಿಸುವಲ್ಲಿ ಸಿಖಂದರ್‌ ವಿಫಲರಾದರು. ಸೀನ್‌ ವಿಲಿಯಮ್ಸ್‌ 45 ರನ್‌ ಮತ್ತು ಕೊನೆಯ ಕ್ಷಣದಲ್ಲಿ ಬ್ರಾಡ್‌ ಇವಾನ್ಸ್‌  28 ರನ್‌ಗಳಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಪರಿಣಾಮ ತಂಡ ಸೊಲೊಪ್ಪಿಕೊಳ್ಳಬೇಕಾಯಿತು.

- Advertisement -

ಶುಭ್‌ಮನ್‌ ಗಿಲ್‌ ಚೊಚ್ಚಲ ಶತಕ

ಇದಕ್ಕೂ ಮೊದಲು  ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ್ದ ಭಾರತ, ಯುವ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ದಾಖಲಿಸಿದ ಶತಕದ ನೆರವಿನಿಂದ 8 ವಿಕೆಟ್‌ ನಷ್ಟದಲ್ಲಿ 289 ರನ್‌ಗಳಿಸಿತ್ತು. ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶುಭ್‌ಮನ್‌ ಗಿಲ್‌ ಭರ್ಜರಿ ಶತಕದ ಮೂಲಕ ಅಬ್ಬರಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಗಿಲ್‌ ಬ್ಯಾಟ್‌ನಿಂದ ದಾಖಲಾದ ಚೊಚ್ಚಲ ಶತಕ ಇದಾಗಿದೆ. 82 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಗಿಲ್‌, ಒಟ್ಟು 97 ಎಸೆತಗಳ ಇನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 130 ರನ್‌ ಗಳಿಸಿ ನಿರ್ಗಮಿಸಿದರು. ಶುಭ್‌ಮನ್‌ಗೆ ತಕ್ಕ ಸಾಥ್‌ ನೀಡಿದ ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ 50 ರನ್‌ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ಟೀಮ್‌ ಇಂಡಿಯಾ ಇನ್ನಿಂಗ್ಸ್‌ ಪರ ಇನ್ನಿಂಗ್ಸ್‌ ಆರಂಭಿಸಿದ್ದ ಶಿಖರ್‌ ಧವನ್‌ (40 ರನ್‌) ಕೆ.ಎಲ್‌. ರಾಹುಲ್‌ 30 ರನ್‌ ಗಳಿಸಿದರು. ಸಂಜು ಸ್ಯಾಮ್ಸನ್‌ 115 ರನ್‌ಗಳಿಸಿದರೆ, ದೀಪಕ್‌ ಹೂಡಾ, ಅಕ್ಷರ್‌ ಪಟೇಲ್‌ ತಲಾ ಒಂದು ರನ್‌ಗಳಿಸಿದರು.

ಐದು ವಿಕೆಟ್‌ ಕಿತ್ತು ಮಿಂಚಿದ ಇವಾನ್ಸ್‌ !

ಜಿಂಬಾಬ್ವೆ ಪರ ಅತ್ಯುತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ಬ್ರಾಡ್‌ ಇವಾನ್ಸ್‌, ತನ್ನ 10 ಓವರ್‌ಗಳ ಸ್ಪೆಲ್‌ನಲ್ಲಿ 54 ರನ್‌ ನೀಡಿ 5 ಪ್ರಮುಖ ವಿಕೆಟ್‌ ಪಡೆದು ಮಿಂಚಿದರು. ಉಳಿದಂತೆ ವಿಕ್ಟರ್‌ ನ್ಯಾಯುಚಿ ಮತ್ತು ಲೂಕ್‌ ಜೋಂಗ್ವೆ ತಲಾ 1 ವಿಕೆಟ್‌ ಪಡೆದರು.

Join Whatsapp