ಹೊಸದಿಲ್ಲಿ: ಗುಜರಾತ್ನಲ್ಲಿ 2002ರ ಗೋಧ್ರಾ ಗಲಭೆಗೆ ಕಾರಣವಾದ ಸಬರಮತಿ ಎಕ್ಸ್’ಪ್ರೆಸ್ ರೈಲಿನ ಎಸ್-6 ಕೋಚ್’ಗೆ ಸಂಘಪರಿವಾರದ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ (SIT) ಅಸಂಬದ್ಧ ಎಂದು ತಳ್ಳಿಹಾಕಿದೆ.
SIT ಕೆಲವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಝಾಕಿಯಾ ಜಾಫ್ರಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ SIT ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ತನಿಖಾ ಪ್ರಕ್ರಿಯೆಯಲ್ಲಿ SIT ಅತ್ಯಂತ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿದೆ ಎಂದು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ಮತ್ತು ಇತರ ಉನ್ನತ ನಾಯಕರ ಪಾತ್ರದ ಬಗ್ಗೆ ಇರುವ ಪುರಾವೆಗಳನ್ನು SIT ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಸಂಸದ ಇಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಹೇಳಿದ್ದರು. SIT ಯಾವುದೇ ತನಿಖೆ ನಡೆಸದೆ ನರಮೇಧಕ್ಕೆ ಸಂಬಂಧಿಸಿದ ಆರೋಪಿಗಳ ಹೇಳಿಕೆಯನ್ನು ಒಪ್ಪಿಕೊಂಡಿದೆ ಎಂದು
ಝಾಕಿಯಾ ಜಾಫ್ರಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಆರೋಪಿಸಿದ್ದರು. ಗೋಧ್ರಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆ ತಲುಪುವ ಮುನ್ನವೇ 3,000 ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿದ್ದರು ಎಂದು ಸಿಬಲ್ ಹೇಳಿದ್ದರು.
SIT ವಿಚಾರಣೆ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ.