ಹಿಸಾರ್: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪೊಲೀಸರು ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಯುವರಾಜ್ ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಚಾಟ್ ನಲ್ಲಿ ಯುಜ್ವೇಂದ್ರ ಚಹಲ್ ಬಗ್ಗೆ ಮಾತನಾಡುವ ವೇಳೆ ಪರಿಶಿಷ್ಟ ಜಾತಿಯನ್ನು ಉಲ್ಲೇಖಿಸಿ ಅವಹೇಳನ ಪದ ಬಳಸಿದ್ದ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದಲ್ಲಿ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಜಿಲ್ಲೆಯ ಹನ್ಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವರಾಜ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3 (1) (ಆರ್) ಮತ್ತು 3 (1) (ಎಸ್) ಹಾಗೂ ಐಪಿಸಿ 153, 153ಎ, 295, 505 ಸೆಕ್ಷನ್ ನಗಳ ಅಡಿಯಲ್ಲಿ 2020ರ ಜೂನ್ ನಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅಂದು ಯುವಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಹಂಸಿ ಪೊಲೀಸರು ಯುವರಾಜ್ ಸಿಂಗ್ ಅವರನ್ನು ಬಂಧಿಸಿದ ನಂತರ ವಿಚಾರಣೆಗೆ ಒಳಪಡಿಸಿದ್ದಾರೆ.
ನಂತರ ಹೈಕೋರ್ಟ್ ಆದೇಶದ ಮೇರೆಗೆ ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಯುವರಾಜ್ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.