ಕೋಲಾರ: ಚುಡಾಯಿಸುತ್ತಿದ್ದುದನ್ನು ಮನೆಯವರಿಗೆ ತಿಳಿಸಿದ ದಲಿತ ಹುಡುಗಿಯರನ್ನು ಬಸ್ ನಿಂದ ಕೆಳಗೆಳೆದು ಯದ್ವಾತದ್ವ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
ಬಾಬು ಎಂಬ ಯುವಕ ಸೇರಿದಂತೆ ಕೆಲವು ಯುವಕರು, ಕಳೆದ ಹಲವು ದಿನಗಳಿಂದ ಬಸ್ ನಲ್ಲಿ ಬರುವ ಯುವತಿಯನ್ನು ಚುಡಾಯಿಸುತ್ತಿದ್ದರು ಎನ್ನಲಾಗಿದ್ದು, ಈ ಹಿಂದೆಯೂ ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಯುವಕರು ತಮ್ಮ ಕೃತ್ಯವನ್ನು ಮುಂದುವರಿಸಿದ್ದಾರೆ. ಇದರಿಂದ ರೋಸಿ ಹೋದ ವಿದ್ಯಾರ್ಥಿನಿಯರು ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ವಿದ್ಯಾರ್ಥಿನಿಯರ ಪೋಷಕರು ಆ ಯುವಕರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವಕರು ಆ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿದ್ದಾಗ ಬಸ್ ನಿಂದ ಕೆಳಗೆ ಎಳೆದು ಥಳಿಸಿದ್ದಾರೆ. ಯುವಕರ ಕುಟುಂಬದ ಮಹಿಳೆಯರು ಕೂಡ ಹಲ್ಲೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.