ನವದೆಹಲಿ: ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಸೇರಿರುವ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಹನ್ನೊಂದು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.
ಮಾಜಿ ಸಿಎಂ ಜಯಲಲಿತರ ಆಪ್ತೆಯಾಗಿದ್ದ ಶಶಿಕಲಾ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದು, ರಾಜಕೀಯವನ್ನು ತೊರೆದಿದ್ದಾರೆ. ಇದೀಗ ಚೆನ್ನೈನ ಹೊರವಲಯದಲ್ಲಿರುವ ಪಯನೂರ್ ಗ್ರಾಮದಲ್ಲಿ, ಸುಮಾರು 24 ಎಕರೆ ಪ್ರದೇಶಗಳಷ್ಟು ವಿಸ್ತೀರ್ಣದಲ್ಲಿದ್ದ 11 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ, ಬೇನಾಮಿ ನಿಷೇಧ ಕಾಯ್ದೆಯಡಿ ಮುಟ್ಟುಗೋಲು ಹಾಕಿದೆ. ಇವೆಲ್ಲವೂ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ 1991-1996ರ ಅವಧಿಯಲ್ಲಿ ಖರೀದಿ ಮಾಡಿದ್ದಾಗಿತ್ತು ಎಂದು ಹೇಳಲಾಗಿದೆ.
1990ರಲ್ಲಿ ಈ ಆಸ್ತಿಯನ್ನು ಖರೀದಿಸಿದ ವೇಳೆ ಇದರ ಮೌಲ್ಯ ಅಂದಾಜು 20 ಲಕ್ಷ ರೂ. ಇದ್ದಿರಬಹುದು, ಆದರೆ ಪ್ರಸಕ್ತ ಈ ಆಸ್ತಿಯ ಮೌಲ್ಯ ಸುಮಾರು 100 ಕೋಟಿ ರೂಪಾಯಿಯಾಗಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ, ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಹೇಳಿದೆ.