ತೈಲ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

Prasthutha|

ಬೆಂಗಳೂರು : ತೈಲ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ನಗರದ ಹೊರ ವಲಯದ ಪೆಟ್ರೋಲ್ ಬಂಕ್  ನಲ್ಲಿ “ ತೈಲ ಬೆಲೆ 100 ನೌಟೌಟ್” ಹೆಸರಿನಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ದೇಶದಲ್ಲಿ ತೈಲ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳು ಕೈಗೆಟುಕದಂತಾಗಿದ್ದು, ಪಕೋಡ – ಚಹಾ ಮಾರಾಟ ಮಾಡಿದರೂ 100 ರೂ ಲಾಭಗಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಜನ ಸಾಮಾನ್ಯರು 100 ರೂ ಕೊಟ್ಟು ಪೆಟ್ರೋಲ್ – ಡೀಸೆಲ್ ಖರೀದಿ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

- Advertisement -

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣ ಕಳೆದೊಂದು ವರ್ಷದಲ್ಲಿ 23 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಅಧ್ಯಯನ ವರದಿ ತಿಳಿಸಿದೆ. ಕೆಲವೆಡೆ ಕೆಲಸ ಇದ್ದರೂ ಅರ್ದ ವೇತನ ಪಡೆಯುತ್ತಿದ್ದಾರೆ. ಅಸಂಘಟಿತ ವಲಯದವರ ಪರಿಸ್ಥಿತಿ ಹೇಳ ತೀರದು. ದುಬಾರಿ ತೈಲ ದರದಿಂದ ಬದಕಲು ಸಾಧ್ಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕ ಅಮಿತ್ ಶಾ ಸಲಹೆಯಂತೆ ಪಕೋಡ ಮಾರಾಟ ಮಾಡಿದರೂ ಈಗಿನ ಪರಿಸ್ಥಿತಿಯಲ್ಲಿ ನೂರು ರೂಪಾಯಿ ಲಾಭ ಗಳಿಸಲು ಸಾಧ್ಯವಿಲ್ಲ. ಅಡುಗೆ ಎಣ್ಣೆ ಬೆಲೆಯೇ 200 ರೂ ತಲುಪಿದೆ. ಪಕೋಡ ತಯಾರಿಸಲು ಬೇಕಾದ ಹಿಟ್ಟು ಮತ್ತಿತರ ವಸ್ತುಗಳ ಬೆಲೆಯೂ ಕೈಗೆಟುಕದಂತಿದೆ. ಚಹಾ ಮಾರಾಟ ಮಾಡಲು ಸಾಧ್ಯವಿಲ್ಲದಂತಹ ಹೀನಾಯ ಸ್ಥಿತಿಗೆ ಬಿಜೆಪಿ ನಾಯಕರು ದೇಶವನ್ನು ತಂದಿಟ್ಟಿದ್ದಾರೆ ಎಂದರು.

- Advertisement -

ಜನ ಸಾಮಾನ್ಯರ ಮೇಲೆ ದರ ಏರಿಕೆಯ ಬರೆ ಹಾಕಿ ಜನರ ಆರ್ಥಿಕ ಶಕ್ತಿಯನ್ನೇ ಬಿಜೆಪಿ ಸರ್ಕಾರ ಕುಂದಿಸಿದೆ. ನರೇಂದ್ರ ಮೋದಿ, ಅಮಿತ್ ಶಾ ಸರ್ಕಾರ ಎಲೆಕ್ಷನ್ ಸರ್ಕಾರವಾಗಿ ಪರಿವರ್ತನೆಯಾಗಿದೆ. ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೆ ಯಾವುದೇ ಬೆಲೆ ಹೆಚ್ಚಳವಾಗುವುದಿಲ್ಲ. ಚುನಾವಣೆ ಮುಗಿದರೆ ಎಲ್ಲಾ ಬೆಲೆಗಳು ಒಂದೇ ಸಮನೆ ಏರುತ್ತವೆ. ಇದಕ್ಕೆ ಪೆಟ್ರೋಲ್ ಡೀಸೆಲ್ ಬಲೆ ಏರಿಕೆಯೇ ಸಾಕ್ಷಿ, ಜನ ಸಾಮಾನ್ಯರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿಯೇ ಇಲ್ಲ ಎಂದರು.

ಮೋದಿ ಅಮಿತ್ ಶಾ ಜೋಡಿ ಈ ದೇಶದಲ್ಲಿ ಅರಾಜಕತೆ ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರದ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ. ಇದರ ಜತೆಗೆ ಅಡುಗೆ ಅನಿಲ ಬೆಲೆ ಕೂಡ ಹೆಚ್ಚಾಗಿದೆ. ಬಡವರ ರಕ್ಷಣೆಗೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಸಬ್ಸಿಡಿ, ಬಡವರ ಪರವಾದ ಕಾರ್ಯಕ್ರಮಗಳನ್ನು ರದ್ದು ಮಾಡಿ ಶ್ರೀಮಂತರ ಪರವಾದ ನಿಲುವುಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ದೇಶದಲ್ಲಿ ಶ್ರೀಮಂತರು ಅತಿ ಶ್ರೀಮಂತರಾಗುತ್ತಿದ್ದಾರೆ. ಬಡವರು ಕಡು ಬಡವರಾಗುತ್ತಿದ್ದಾರೆ ಎಂದು ರಕ್ಷಾ ರಾಮಯ್ಯ ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಯುವ ಸಮೂಹ ಆಕ್ರೋಶಗೊಂಡಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ, ಉದ್ಯೋಗ ಸೃಷ್ಟಿಸುವ ಬದಲು ದುಡಿಯುವವರ ಕೈ ಕಟ್ಟಿಹಾಕಿದ್ದಾರೆ. ನೋಟು ಅಮಾನ್ಯೀಕರಣದಿಂದ ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಳ್ಳಬೇಕಾಯಿತು. ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಹೆಚ್ಚಾಗುತ್ತಲೇ ಇದೆ ಎಂದರು.



Join Whatsapp