ಲಕ್ಷದ್ವೀಪದ ಕರಾಳ ನಿಯಮಗಳ ಸಮರ್ಥನೆ ಮಾಡಿದ್ದ ಕಲೆಕ್ಟರ್ ವಿರುದ್ಧ ಪ್ರತಿಭಟಿಸಿದ 12 ಕಾಂಗ್ರೆಸ್ ಕಾರ್ಯಕರ್ತರ ಬಂಧನ

Prasthutha|

ಲಕ್ಷದ್ವೀಪದ ವಿವಾದಿತ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಜಾರಿಗೆ ತಂದಿರುವ ಹೊಸ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದ ಲಕ್ಷದ್ವೀಪ ಕಲೆಕ್ಟರ್ ಎಸ್.ಅಸ್ಕರ್ ಅಲಿ ವಿರುದ್ಧ ಪ್ರತಿಭಟನೆ ನಡೆಸಿದ 12 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಿಲ್ಟನ್ ದ್ವೀಪದಲ್ಲಿ  ಬಂಧಿಸಲಾಗಿದೆ ಎಂದು ಲಕ್ಷದ್ವೀಪದ ಏಕೈಕ ಡಿಜಿಟಲ್ ವೇದಿಕೆಯಾದ ದ್ವೀಪ್ ಡೈರಿ ವರದಿ ಮಾಡಿದೆ.

- Advertisement -

ಕೊಚ್ಚಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲಿ ಅವರು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ವಿವಾದಾತ್ಮಕ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದರು. ಹೊಸ ನಿಯಮಗಳ ವಿರುದ್ಧ ಲಕ್ಷ ದ್ವೀಪದಲ್ಲಿ ನಡೆದ ಪ್ರತಿಭಟನೆಯನ್ನು ಅಸ್ಕರ್ ಅಲಿ ಅವರು ತಪ್ಪು ಮಾಹಿತಿಯಿಂದ ನಡೆದ ಪ್ರತಿಭಟನೆ ಎಂದು ಹೇಳಿದ್ದರು. ಮಾತ್ರವಲ್ಲ ಹೊಸ ಕಾನೂನುಗಳಿಂದ ಲಕ್ಷದ್ವೀಪದ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಇದಾದ ನಂತರ, ಕಿಲ್ಟನ್ ದ್ವೀಪದಲ್ಲಿ ಸುಮಾರು 20 ಯುವ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ಕಲೆಕ್ಟರ್ ಅವರ ಪ್ರತಿಕೃತಿಯನ್ನು ದಹಿಸಿದ್ದರು. ನಂತರ ಅವರಲ್ಲಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಿಲ್ತಾನ್ ದ್ವೀಪದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಹಮತುಲ್ಲಾ ಸೇರಿದ್ದಾರೆ ಎಂದು ದ್ವೀಪ್ ಡೈರಿ ವರದಿ ಮಾಡಿದೆ. ಬಂಧಿತರ ವಿರುದ್ಧ ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ

Join Whatsapp