ಬೆಂಗಳೂರು : ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಮುಹಮ್ಮದ್ ಹ್ಯಾರಿಸ್ ನಲಪಾಡ್ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ನಾಳೆ ಅಧಿಕೃತವಾಗಿ ಹೊರಬೀಳಲಿದ್ದು, ದೊರಕಿರುವ ಮಾಹಿತಿಗಳ ಪ್ರಕಾರ, ಮುಹಮ್ಮದ್ ಹ್ಯಾರಿಸ್ ನಲಪಾಡ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಮುಹಮ್ಮದ್ ಹ್ಯಾರಿಸ್ ಅವರು 64,203 ಮತಗಳನ್ನು ಪಡೆದಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಭವ್ಯಾ ಕೆ.ಆರ್. ಮತ್ತು ಎಂ.ಎಸ್. ರಕ್ಷಾ ರಾಮಯ್ಯ ಆಯ್ಕೆಯಾಗಿದ್ದಾರೆ. ಭವ್ಯಾ ಅವರು 3,153 ಮತ್ತು ರಕ್ಷಾ ರಾಮಯ್ಯ ಅವರು 57,271 ಮತಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಜ. 10, 11, 12ರಂದು ರಾಜ್ಯಾದ್ಯಂತ ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆದಿತ್ತು. ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್ ಮೂಲಕ ಚುನಾವಣೆ ನಡೆಸಲಾಗಿತ್ತು.
ಯುವ ಕಾಂಗ್ರೆಸ್ ನ ಒಟ್ಟು 1,92,703 ಮತಗಳಲ್ಲಿ 14,150 ಮತಗಳು ಚಲಾವಣೆಯಾಗಿಲ್ಲ ಮತ್ತು 27,206 ಮತಗಳು ತಿರಸ್ಕೃತಗೊಂಡಿವೆ ಎನ್ನಲಾಗಿದೆ.